ಹಿಂದಿ ಹೇರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು, ಸೆ.15: ರಾಜ್ಯಕ್ಕೆ ಯಾವುದೇ ಕಾರಣಕ್ಕೂ ಹಿಂದಿ ಭಾಷೆಯನ್ನು ಹೇರಬಾರದೆಂದು ಒತ್ತಾಯಿಸಿ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು.
ರವಿವಾರ ನಗರದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಕವಿಕಾ ಅಧ್ಯಕ್ಷ ಎಸ್.ಮನೋಹರ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ದೇಶ ಪೂರ್ವಕವಾಗಿ ಹಿಂದಿ ಹೇರಿಕೆ ಮೂಲಕ ಕನ್ನಡ ಹಾಗೂ ಇತರೆ ಭಾಷೆಗಳನ್ನು ಹತ್ತಿಕ್ಕುವ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ಜಿಡಿಪಿ ವೃದ್ಧಿಗೆ ಯಾವುದೇ ಯೋಜನೆಗಳನ್ನು ಕೈಗೊಳ್ಳದೆ ಇರುವುದರಿಂದ ದೇಶ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಉದ್ಯೋಗ ನಿವಾರಣೆಗೆ ಹಾಗೂ ಉದ್ಯೋಗ ಸೃಷ್ಟಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದರು.
ದೇಶದ ಯುವಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಪ್ರತಿ ಹಂತದಲ್ಲೂ ಬಡವರು ಜೀವನ ಸಾಗಿಸುವುದೇ ಅತ್ಯಂತ ಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್ಥಿಕತೆಗೆ ಹಾಗೂ ಆರ್ಥಿಕ ಸುಧಾರಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದು, ನರೇಂದ್ರ ಮೋದಿಯವರು ಕೇವಲ ಪ್ರಚಾರ ಕೋಸ್ಕರ ದೇಶ ಸುತ್ತುವುದನ್ನು ಹೊರತುಪಡಿಸಿ ದೇಶದ ಅಭಿವೃದ್ಧಿಗೆ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
.jpg)







