ಉಪ್ಪಿನಂಗಡಿ ಸಿಎ ಬ್ಯಾಂಕ್: ಸದಸ್ಯರಿಗೆ ಶೇ.18 ಡಿವಿಡೆಂಡ್

ಉಪ್ಪಿನಂಗಡಿ: ದ.ಕ. ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತವು 2018-19ನೇ ಸಾಲಿನಲ್ಲಿ ಒಟ್ಟು ವ್ಯವಹಾರದಿಂದ 2 ಕೋ. 32 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ. 18 ರಷ್ಟು ಡಿವಿಡೆಂಡ್ ಘೋಷಿಸಿದೆ.
ಉಪ್ಪಿನಂಗಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿರುವ ಸಭಾಂಗಣದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆ ಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಯಶವಂತ ಜಿ. ಲಾಭಾಂಶ ಪ್ರಕಟಿಸಿ, ಈ ಘೋಷಣೆ ಮಾಡಿದರು.
1.22 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಘದ ಗೋದಾಮು ಕಟ್ಟಡದ ಕಾಮಗಾರಿಗೆ ಸಂಬಂಧಿಸಿ ರಚಿಸಲಾದ ಕಟ್ಟಡ ಸಮಿತಿಯ ಸಭೆಯು ನಿಯಮಿತವಾಗಿ ನಡೆಯದಿರುವ ಬಗ್ಗೆ, ಕೃಷಿ ಪತ್ತಿನ ಸಹಕಾರಿ ಸಂಘಗಳ ಲಾಭಾಂಶಕ್ಕೆ ಆದಾಯ ತೆರಿಗೆ ವಿಧಿಸದಂತೆ ಸರಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ, ಸಂಘದಲ್ಲಿನ ಸಾಮಾಜಿಕ ಉಪಕಾರ ನಿಧಿಯ ಬಳಕೆಯನ್ನು ಮಹಾ ಸಭೆಯಲ್ಲಿ ವಿವರಿಸುವ ಬಗ್ಗೆ, ಲೆಕ್ಕ ಪರಿಶೋಧಕರ ನೇಮಕಾತಿಯ ಬಗ್ಗೆ, ಸಂಘದ ಸದಸ್ಯರಿಗೆ ರಸಗೊಬ್ಬರ, ಮೈಲುತುತ್ತು ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕೆಂಬ ಬಗ್ಗೆ ಸೇರಿದಂತೆ ಹಲವು ವಿಚಾರಗಳನ್ನು ಸಂಘದ ಸದಸ್ಯರು ಮಹಾ ಸಭೆಯಲ್ಲಿ ಪ್ರಸ್ತಾಪಿಸಿದರು.
ಮಹಾ ಸಭೆಯಲ್ಲಿ ಅತೀ ಹೆಚ್ಚು ಗೊಬ್ಬರ ಖರೀದಿಸಿ ಪ್ರೋತ್ಸಾಹ ನೀಡಿದ ಕೃಷಿಕ ಸದಸ್ಯರುಗಳಾದ ಇಳಂತಿಲದ ಕೆ. ವೆಂಟರಮಣ ಪ್ರಸಾದ್ ಹಾಗೂ ಹಿರೆಬಂಡಾಡಿಯ ಎಚ್. ಪದ್ಮ ಶೆಟ್ಟಿ, ಮತ್ತು ಸಂಘ ಸಂಸ್ಥೆಗಳ ನೆಲೆಯಲ್ಲಿ ಬೆಳ್ಳಾರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಗೂ ವಿಟ್ಲದ ಪಡ್ನೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಸದಸ್ಯರುಗಳಾದ ಮಧುವನ ಗೋಪಾಲಕೃಷ್ಣ ಭಟ್, ದಿವಾಕರ ಶೆಟ್ಟಿ, ಅಗರ್ತ ಸುಬ್ರಹ್ಮಣ್ಯ ಭಟ್, ಪೆಲಪ್ಪಾರು ವೆಂಕಟರಮಣ ಭಟ್ , ಎಂ.ಜಿ. ಭಟ್, ಚಂದ್ರಶೇಖರ್ ತಾಳ್ತಜೆ, ರೂಪೇಶ್ ರೈ , ಜಯಂತ ಪುರೋಳಿ ಮೊದಲಾದವರು ಮಾತನಾಡಿ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಕೈಲಾರ್ ರಾಜಗೋಪಾಲಭಟ್, ಚಂದ್ರಶೇಖರ್ ಮಡಿವಾಳ, ಸುರೇಶ್ ಅತ್ರಮಜಲು, ವಿಜಯಕುಮಾರ್ ಕಲ್ಲಳಿಕೆ , ರಾಜಗೋಪಾಲ ಹೆಗ್ಡೆ, ಸಂತೋಷ್ ಕುಮಾರ್ ಬಜತ್ತೂರು, ಎನ್. ಗೋಪಾಲ ಹೆಗ್ಡೆ ಮೊದಲಾದವರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಯತೀಶ್ ಶೆಟ್ಟಿ ಯು., ನಿರ್ದೇಶಕರಾದ ದಯಾನಂದ ಎಸ್., ಕೆ.ವಿ. ಪ್ರಸಾದ್, ಎಂ. ಜಗದೀಶ್ ರಾವ್, ರಾಮಚಂದ್ರ ಮಣಿಯಾಣಿ, ಯು. ಭಾಸ್ಕರ ಆಚಾರ್ಯ, ಧರ್ಣಪ್ಪ ನಾಯ್ಕ, ಸುಜಾತ ಆರ್. ರೈ, ಶ್ಯಾಮಲಾ ಶೆಣೈ, ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಜತ್ತಪ್ಪ ಗೌಡ ವರದಿ ಮಂಡಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಕ್ಲೇರಿ ವೇಗಸ್ ಲೆಕ್ಕಪತ್ರ ಮಂಡಿಸಿದರು. ಸಹಾಯಕ ವ್ಯವಸ್ಥಾಪಕ ಎಚ್. ಪುಷ್ಪರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್ ಸಿಬ್ಬಂದಿ ಸಹಕರಿಸಿದರು.







