'ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ'...: ಅಮಿತ್ ಶಾಗೆ ಕಮಲ್ ಹಾಸನ್ ತಿರುಗೇಟು

ಚೆನ್ನೈ, ಸೆ.16: “ಭಾರತ ಪ್ರಜಾಪ್ರಭುತ್ವವಾದಾಗ ವೈವಿಧ್ಯತೆಯಲ್ಲಿ ಏಕತೆ ಕಾಪಾಡುವ ವಾಗ್ದಾನ ಮಾಡಿದ್ದೇವೆ. ಈಗ ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ ಆ ವಾಗ್ದಾನದಿಂದ ಹಿಂದೆ ಸರಿಯಬಾರದು'' ಎಂದು ಹಿರಿಯ ನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಕಾಡಿದ್ದಾರೆ.
ಹಿಂದಿ ದಿವಸ ಸಮಾರಂಭದಲ್ಲಿ ಒಂದು ದೇಶ ಒಂದು ಭಾಷೆ ನೀತಿಯಾನುಸಾರ ಹಿಂದಿ ರಾಷ್ಟ್ರ ಭಾಷೆಯಾಗಬೇಕೆನ್ನುವ ಅರ್ಥದಲ್ಲಿ ಮಾತನಾಡಿದ್ದ ಶಾ ಹೇಳಿಕೆ ವಿರುದ್ಧ ಕಮಲ್ ಹಾಸನ್ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದ್ದಾರೆ.
“ಜಲ್ಲಿಕಟ್ಟು ಕೇವಲ ಒಂದು ಪ್ರತಿಭಟನೆಯಾಗಿತ್ತು, ಆದರೆ ನಮ್ಮ ಭಾಷೆಗಾಗಿ ಯುದ್ಧ ಅದಕ್ಕಿಂತಲೂ ದೊಡ್ಡದಾಗಲಿದೆ. ಭಾರತ ಅಥವಾ ತಮಿಳುನಾಡಿಗೆ ಇಂತಹ ಯುದ್ಧ ಬೇಕಾಗಿಲ್ಲ. ನಾವು ಎಲ್ಲಾ ಭಾಷೆಗಳನ್ನೂ ಗೌರವಿಸುತ್ತೇವೆ, ಆದರೆ ನಮ್ಮ ಮಾತೃ ಭಾಷೆ ಯಾವತ್ತೂ ತಮಿಳು ಆಗಲಿದೆ'' ಎಂದು ಕಮಲ್ ಗೃಹ ಸಚಿವರತ್ತ ಮಾತಿನ ಛಾಟಿಯೇಟು ಬೀಸಿದ್ದಾರೆ.
“ದೇಶದ ಜನರು ಬಂಗಾಳಿ ಭಾಷೆಯ ರಾಷ್ಟ್ರಗೀತೆಯನ್ನು ಸಂತೋಷದಿಂದ ಹಾಡುತ್ತಾರೆ. ಆ ಹಾಡನ್ನು ಬರೆದ ಕವಿ ಎಲ್ಲಾ ಭಾಷೆಗಳು ಹಾಗೂ ಸಂಸ್ಕೃತಿಗಳಿಗೆ ಗೌರವ ನೀಡಿದ್ದರಿಂದಲೇ ಅದು ನಮ್ಮ ರಾಷ್ಟ್ರಗೀತೆಯಾಗಿದೆ. ಆದುದರಿಂದ ಸರ್ವರನ್ನೊಳಗೊಂಡ ಭಾರತದಲ್ಲಿ ಸರ್ವರೂ ಒಳಗೊಳ್ಳದಂತೆ ಮಾಡಬೇಡಿ'' ಎಂದು ಕಮಲ್ ಹೇಳಿದ್ದಾರೆ.