ಡಿಕೆಶಿಗೆ ಜಾಮೀನು ನೀಡಬೇಡಿ: ಈಡಿಯಿಂದ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಕೆ
ಹೊಸದಿಲ್ಲಿ, ಸೆ.16: ಹೊಸದಿಲ್ಲಿ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸೆ.16ರಂದು ಈಡಿ ಅಧಿಕಾರಿಗಳು ಹೊಸದಿಲ್ಲಿಯ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರೋಪಿಯಾಗಿರುವ ಡಿಕೆಶಿ ಈಡಿ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ ಡಿಕೆಶಿ ಹತ್ತಕ್ಕೂ ಹೆಚ್ಚು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ನಮಗೆ ತನಿಖೆಯ ವೇಳೆ ಸಿಕ್ಕ ಸಾಕ್ಷ್ಯಾಧಾರಗಳ ಪ್ರಕಾರ ಆರೋಪಿಯ ಕೈವಾಡವಿರುವುದು ಗೊತ್ತಾಗಿದೆ.
ಅಲ್ಲದೆ, ವಿಚಾರಣೆಯ ವೇಳೆ ಅನೇಕ ಮಂದಿಯ ಹೆಸರು ಸಹ ಈ ಪ್ರಕರಣದಲ್ಲಿ ಕೇಳಿ ಬಂದಿದೆ. ಈ ಕೇಸ್ ತಾರ್ಕಿಕ ಅಂತ್ಯ ಕಾಣಬೇಕಾದರೆ ಇವರೆಲ್ಲರ ತನಿಖೆ ಮತ್ತು ವಿಚಾರಣೆ ಅಗತ್ಯವಾಗಿದೆ. ಹೀಗಾಗಿ ಈ ಆರೋಪಿಗೆ ಜಾಮೀನು ನೀಡುವುದು ಸೂಕ್ತವಲ್ಲ. ಈತ ತುಂಬಾ ಪ್ರಭಾವಶಾಲಿಯಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬಿರುವ ಜೊತೆಗೆ ತನಿಖೆಗೆ ಅಡ್ಡಿ ಪಡಿಸುವ ಸಾಧ್ಯತೆಗಳಿವೆ ಎಂದು ಈಡಿ ತನ್ನ ಆಕ್ಷೇಪಣೆಯಲ್ಲಿ ತಿಳಿಸಿದೆ.