ಸೆ.19ಕ್ಕೆ ದಲಿತ ಉದ್ದಿಮೆದಾರರ ಸಮಾವೇಶ: ಡಾ.ಎಲ್.ಹನುಮಂತಯ್ಯ
ಬೆಂಗಳೂರು, ಸೆ.17: ಎಸ್ಸಿ, ಎಸ್ಟಿ ಸಮುದಾಯದವರು ಉದ್ದಿಮೆ ಸ್ಥಾಪಿಸಲು ಎಲ್ಲ ರೀತಿಯ ಸಹಕಾರ ಹಾಗೂ ಮಾರ್ಗದರ್ಶನ ನೀಡುವ ಸಲುವಾಗಿ ‘ದಲಿತ ಉದ್ದಿಮೆದಾರರ ಸಮಾವೇಶ’ವನ್ನು ಸೆ.19ರಂದು ವಸಂತನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭವನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಗೋವಿಂದ ಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಸಚಿವ ಜಗದೀಶ್ ಶೆಟ್ಟರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹಾಗೂ ಎಲ್ಲ ಜಿಲ್ಲೆಗಳಿಂದ 3 ಸಾವಿರ ಉದ್ದಿಮೆದಾರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಎಸ್ಸಿ, ಎಸ್ಟಿ ಜನಾಂಗದವರು ಉದ್ದಿಮೆದಾರರಾಗಲು ಎದುರಾಗುವ ತೊಡಕುಗಳ ನಿವಾರಣೆಗೆ ಸಹಕಾರ ನೀಡುವುದು. ರಾಜ್ಯದಲ್ಲಿ ನಿವೇಶನ, ಮಳಿಗೆಗಳನ್ನು ನಿಗದಿತ ಮೀಸಲಾತಿಯಂತೆ ಹಂಚಿಕೆ ಮಾಡಲು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ವ್ಯವಹರಿಸುವುದು. ಅಲ್ಲದೆ, ಸರಕಾರ ಮಳಿಗೆಗಳ ಹಂಚಿಕೆಯಲ್ಲಿ ಶೇ.75ರಷ್ಟು ರಿಯಾಯಿತಿಯನ್ನು ನೀಡುವಂತೆ ಸಮಾವೇಶದಲ್ಲಿ ಮನವಿ ಮಾಡಲಾಗುತ್ತದೆ ಎಂದರು.
ಕೆಎಸ್‌ಎಫ್‌ಸಿ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ ಶೇ.4ರಷ್ಟು ಬಡ್ಡಿದರದಲ್ಲಿ ಅವಧಿ ಸಾಲ ಮತ್ತು ದುಡಿಮೆ ಬಂಡವಾಳವನ್ನು 10 ಕೋಟಿ ರೂ.ವರೆಗೂ ಸಾಲ ವಿತರಿಸುವುದು ಮತ್ತು ಮರುಪಾವತಿ ಅವಧಿ 8 ವರ್ಷಕ್ಕೆ ವಿಸ್ತರಿಸುವಲ್ಲಿ ಶ್ರಮಿಸಿದ್ದೇವೆ ಹಾಗೂ ಹಳೆಯ ಕೈಗಾರಿಕಾ ಪ್ರದೇಶಗಳಲ್ಲಿ ಬಾಕಿ ಉಳಿದಿರುವ ನಿವೇಶನಗಳಲ್ಲಿ ಶೇ.25ರಷ್ಟನ್ನು ಈ ಜನಾಂಗದವರಿಗೆ ಹಂಚಿಕೆಗೆ ಮೀಸಲಿರಿಸಲು ಯಶಸ್ವಿಯಾಗಿದ್ದೇವೆ ಎಂದು ಮಾಹಿತಿ ನೀಡಿದರು.
ಬೇಡಿಕೆಗಳು: ಎಸ್ಸಿ, ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಗುತ್ತಿಗೆ ಕಾಮಗಾರಿ ಕೆಲಸದ ಆದೇಶದ ಆಧಾರದ ಮೇಲೆ ಶೇ.4ರಷ್ಟು ಬಡ್ಡಿ ದರದಲ್ಲಿ 1 ಕೋಟಿ ರೂ.ವರೆಗೆ ಸಾಲ ಸೌಲಭ್ಯ ನೀಡಬೇಕು. ಉದ್ದಿಮೆದಾರರಿಗೂ ಹಾಗೂ ಪರಿಶಿಷ್ಟೇತರ ಉದ್ದಿಮೆದಾರರಿಗೂ ಶೇ.4ರಷ್ಟು ನೀಡಲಾಗುತ್ತಿದೆ. ಆದುದರಿಂದ ಈ ಜನಾಂಗಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಬೇಕು ಹಾಗೂ ಉದ್ದಿಮೆದಾರರು ಬ್ಯಾಂಕ್ ಮತ್ತು ಕೆಎಸ್‌ಎಫ್‌ಸಿಯಲ್ಲಿ ಸಾಲ ಪಡೆಯಲು ಸಮಾನಾಂತರ ಖಾತರಿ ವ್ಯವಸ್ಥೆಯನ್ನು ಸರಕಾರವೇ ಒದಗಿಸಬೇಕು.