10 ಲಕ್ಷಕ್ಕೂ ಅಧಿಕ ಕಾರ್ಮಿಕರ ಬದುಕು ಅತಂತ್ರ: ಗಣಿ ತುರ್ತು ನಿಧಿ ಬಿಡುಗಡೆಗೆ ಸಿಎಂಗೆ ಮನವಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.17: ಗಣಿಗಾರಿಕೆ ಮೇಲೆ ವಿಧಿಸಿರುವ ನಿರ್ಬಂಧದಿಂದಾಗಿ ಸಂಕಷ್ಟಕ್ಕೀಡಾಗಿರುವ ಲಕ್ಷಾಂತರ ಕಾರ್ಮಿಕರ ಕುಟುಂಬಗಳಿಗೆ ಗಣಿ ತುರ್ತು ನಿಧಿಯ ಹಣದಲ್ಲಿ ಕೆಲಭಾಗವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಗಣಿ ಅವಲಂಬಿತರ ವೇದಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಒತ್ತಾಯಿಸಿದ್ದಾರೆ.
ಕರ್ನಾಟಕದ ಗಣಿಗಾರಿಕಾ ಕ್ಷೇತ್ರ ಗಂಭೀರ ರೂಪದ ಸವಾಲುಗಳನ್ನು ಎದುರಿಸುತ್ತಿದೆ. ದುರಾದೃಷ್ಟವೆಂದರೆ, ಈ ಗಣಿಗಾರಿಕೆ ನಿರ್ಬಂಧಗಳಿಂದಾಗಿ ಗಣಿಗಾರಿಕೆಯ ಮೇಲೆ ಅವಲಂಬಿತವಾಗಿರುವ 10 ಲಕ್ಷಕ್ಕೂ ಅಧಿಕ ಮಂದಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಇವರ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕೆಂದು ವೇದಿಕೆಯ ವಕ್ತಾರ ಎಸ್.ರಾಜಕುಮಾರ್ ಒತ್ತಾಯಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ರಾಜ್ಯದಲ್ಲಿ ಎಸ್ಪಿವಿಯನ್ನು ರಚನೆ ಮಾಡಲಾಗಿದೆ. ಗಣಿಗಾರಿಕೆ ನಡೆಯುವ ಜಿಲ್ಲೆಗಳಲ್ಲಿನ ಸ್ಥಳೀಯ ಪ್ರದೇಶ ಮತ್ತು ಜನರ ಸಾಮಾಜಿಕ-ಆರ್ಥಿಕ ಬೆಳವಣಿಗೆ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲೆಂದೇ ಈ ಎಸ್ಪಿವಿಯನ್ನು ಆರಂಭಿಸಲಾಗಿದೆ. ಈ ಎಸ್ಪಿವಿಗೆ ಗಣಿ ಕಂಪನಿಗಳು ತಾವು ಮಾರಾಟ ಮಾಡುವ ಕಬ್ಬಿಣದ ಅದಿರಿನಿಂದ ಬರುವ ಆದಾಯದಲ್ಲಿ ಶೇ.10ರಷ್ಟುನ್ನು ಪಾವತಿ ಮಾಡಿವೆ. ಹೀಗೆ ಸಂಗ್ರಹಿಸಲಾದ ಹಣವೇ 12 ಸಾವಿರ ಕೋಟಿ ರೂ.ವನ್ನು ಬಳಕೆ ಮಾಡಿಲ್ಲ. ಈ ಹಣವನ್ನು ಗಣಿ ಅವಲಂಬಿತರ ಶ್ರೇಯೋಭಿವೃದ್ಧಿಗೆ ರಾಜ್ಯ ಸರಕಾರ ಬಳಸಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.







