ಮಾಧ್ಯಮ ಕ್ಷೇತ್ರ ಸುಳ್ಳು ಬಿತ್ತುವ ಉದ್ಯಮವಾಗಿದೆ: ಬೆಂಗಳೂರು ವಿವಿ ಕುಲಸಚಿವ ಪ್ರೊ.ಬಿ.ಕೆ.ರವಿ
ಬೆಂಗಳೂರು, ಸೆ.18: ಪತ್ರಿಕೋದ್ಯಮ ಎಷ್ಟು ವೇಗವಾಗಿ ಬೆಳವಣಿಗೆ ಕಂಡಿತೋ ಅಷ್ಟೇ ವೇಗವಾಗಿ ಅದೊಂದು ಉದ್ಯಮವಾಗಿ ಮಾರ್ಪಟ್ಟಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊ.ಬಿ.ಕೆ.ರವಿ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಬದಲಾಗುತ್ತಿರುವ ಮಾಧ್ಯಮಗಳ ದೃಷ್ಟಿಕೋನ’ ವಿಷಯದ ಕುರಿತು ಪತ್ರಿಕೋದ್ಯಮದ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪತ್ರಿಕೋದ್ಯಮವು ಸ್ವಾತಂತ್ರ ಪೂರ್ವದಲ್ಲಿ ದೇಶದ ಸ್ವಾತಂತ್ರ ಚಳವಳಿಯಲ್ಲಿ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸಿದೆ. ಅಂದು ಪತ್ರಿಕೋದ್ಯಮವು ಕೇವಲ ಸೇವಾ ಕ್ಷೇತ್ರವಾಗಿತ್ತೇ ಹೊರತು ಲಾಭದ ದೃಷ್ಟಿಕೋನವಿರಲಿಲ್ಲ. ಆದರೆ, ಕಾಲಾಂತರದಲ್ಲಿ ಮಾಧ್ಯಮ ಕ್ಷೇತ್ರ ಬದಲಾದಂತೆ, ಅದರ ಆಶಯವೂ ಬದಲಾಗಿದೆ ಎಂದು ಅವರು ಹೇಳಿದರು.
ಲಾಭ-ನಷ್ಟದ ಗಳಿಕೆಯ ಉದ್ಯಮವಾಗಿರುವ ಮಾಧ್ಯಮ ಕ್ಷೇತ್ರ ಸಾಮಾಜಿಕ ಜವಾಬ್ದಾರಿ ಮತ್ತು ಸಾಮಾಜಿಕ ಕಳಕಳಿಯನ್ನು ಮರೆಯುತ್ತಿದೆ. ಮಾಧ್ಯಮ ಕ್ಷೇತ್ರವನ್ನು ಒಂದು ಉದ್ಯಮವನ್ನಾಗಿ ಮಾರ್ಪಡಿಸಿಕೊಂಡು ಜನಸಮುದಾಯವನ್ನು ಗ್ರಾಹಕರನ್ನಾಗಿ ಮಾಡಿಕೊಂಡಿದೆ. ಪತ್ರಿಕೋದ್ಯಮದ ನೈತಿಕ ಮೌಲ್ಯಗಳೇ ಇಂದು ಇಲ್ಲವಾಗಿವೆ ಎಂದು ನುಡಿದರು.
ಮಾಧ್ಯಮಗಳಿಂದು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿಯಬೇಕಿದೆ. ಆದರೆ, ಇಂದಿನ ಮಾಧ್ಯಮಗಳು ದೇಶದ ಜನರ ದೃಷ್ಟಿಕೋನವನ್ನೇ ಬದಲಿಸಿವೆ. ಜನರಲ್ಲಿ ಸುಳ್ಳುಗಳನ್ನು ಬಿತ್ತಲು ಮುಂದಾಗಿವೆ. ಮಾಧ್ಯಮಗಳು ತಮ್ಮ ಅಸ್ತಿತ್ವಕ್ಕಾಗಿ ನಂಬಿಕೆ ಹಾಗೂ ವಿಶ್ವಾಸ ಗಳಿಸಿಕೊಳ್ಳಬೇಕು. ಆರೋಗ್ಯವಂತ ಮಾಧ್ಯಮಗಳಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.
ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶ ಮಾಡುವ ಯುವಪ್ರತಿಭೆಗಳು ತಂತ್ರಜ್ಞಾನದಿಂದಲೇ ಎಲ್ಲಾ ಸಾಧ್ಯ ಎಂದು ತಿಳಿಯಬಾರದು. ಸಮಗ್ರವಾದ ಅಧ್ಯಯನ ನಡೆಸಬೇಕು, ಯಾವುದೇ ಭಯ, ಹಿಂಜರಿಕೆಯಿಲ್ಲದೆ ಸತ್ಯವನ್ನು ನೇರವಾಗಿ ಹೇಳುವಂತಿರಬೇಕು. ಸಾಮಾಜಿಕ ಬದ್ಧತೆ, ಜನಪರ ಕಾಳಜಿಯಿರಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ ಹುಣಸವಾಡಿ ರಾಜನ್ ಮಾತನಾಡಿ, ಮಾಧ್ಯಮಗಳಿಗೆ ಪ್ರಸಾರ ಮತ್ತು ಟಿಆರ್‌ಪಿ ಮುಖ್ಯ ಅಜೆಂಡಗಳಾಗಿಬಿಟ್ಟಿವೆ. ಅಭಿಪ್ರಾಯಗಳನ್ನು ಹುಟ್ಟುಹಾಕಬೇಕಾದ ಮಾಧ್ಯಮಗಳು ಇಂದು ತೀರ್ಪುಗಳನ್ನು ನೀಡಲು ಮುಂದಾಗಿವೆ ಎಂದು ವ್ಯಾಖ್ಯಾನಿಸಿದರು.
ಮಾಧ್ಯಮಗಳು ತಮ್ಮ ಲಾಭಕ್ಕಾಗಿ ಸುಳ್ಳನ್ನು ಸತ್ಯವನ್ನಾಗಿ, ಸತ್ಯವನ್ನು ಸುಳ್ಳನ್ನಾಗಿ ಬಿಂಬಿಸುತ್ತಿವೆ. ಜನರನ್ನು ವಾಸ್ತವದಿಂದ ದೂರವಿಡಲಾಗುತ್ತಿದೆ. ಸಮಾಜ ಎಚ್ಚೆತ್ತುಕೊಳ್ಳಬೇಕು. ಮಾಧ್ಯಮಗಳು ಹರಡುತ್ತಿರುವ ಭ್ರಮೆ ಮತ್ತು ಅಸತ್ಯಗಳ ವಿರುದ್ಧ ದನಿ ಎತ್ತಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಎಚ್.ರಾಮರಾವ್, ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜರೆಡ್ಡಿ, ಪ್ರಾಂಶುಪಾಲೆ ಡಾ.ಬಿ.ಆರ್.ಪರಿಣಿತಾ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್.ಜಯಸಿಂಹ ಉಪಸ್ಥಿತರಿದ್ದರು.