ಮಹಿಳಾ ಮೀನುಗಾರರ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಬ್ಯಾಂಕ್‌ಗಳಿಗೆ ಆದೇಶ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಸೆ.18: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರು ವಂತೆ ಮಹಿಳಾ ಮೀನುಗಾರರು 2017-18 ಮತ್ತು 2018-19ನೆ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದಿದ್ದ 50,000ರೂ. ವರೆಗಿನ 60ಕೋಟಿ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮರು ಪಾವತಿ ಮಾಡಲು ಒತ್ತಡ ಹೇರುತ್ತಿರುವ ಬಗ್ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮಾಡಿದ ಮನವಿಗೆ ಕೂಡಲೇ ಸ್ಪಂದಿಸಿದ ಸಚಿವರು, ಈಗಾಗಲೇ ಸರಕಾರ ಈ ಯೋಜನೆಗಾಗಿ 60 ಕೋಟಿ ರೂ. ಮೀಸಲಿರಿಸಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಿಂದ ಮಹಿಳಾ ಮೀನುಗಾರರ ಸಾಲದ ಬಗ್ಗೆ ಮಾಹಿತಿಯನ್ನು ಕೇಳಲಾಗಿದೆ ಎಂದರು.
ಜಿಲ್ಲೆಯ ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ರುದ್ರೇಶ್‌ರೊಂದಿಗೆ ಸಭೆ ನಡೆಸಿ ತಕ್ಷಣದಿಂದಲೇ ಬ್ಯಾಂಕುಗಳು ಮಹಿಳಾ ಮೀನುಗಾರರಿಗೆ ಸಾಲ ಮರು ಪಾವತಿಗೆ ಯಾವುದೇ ರೀತಿಯಲ್ಲಿ ಒತ್ತಡ ಹೇರದಂತೆ ಆದೇಶ ನೀಡಲಾಗು ವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.





