ಶ್ರೀ ಜಯದೇವ ಆಸ್ಪತ್ರೆಯಲ್ಲಿ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ
ಅ.11-14ರವರೆಗೆ ಬೆಂಗಳೂರಿನಲ್ಲಿ, ಅ.15, 16ರಂದು ಮೈಸೂರಿನ ಆಸ್ಪತ್ರೆಯಲ್ಲಿ 200 ಬಡರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಕೆ
ಬೆಂಗಳೂರು, ಸೆ.19: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಅಮರಿಕ ಹಾಗೂ ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಶನ್, ವಿಸ್ಕಿನ್ ಸನ್, ಅಮೆರಿಕ ಇವರ ಸಹಯೋಗದಲ್ಲಿ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 11ರಿಂದ 14ರವರೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹಾಗೂ ಅ.15 ಮತ್ತು 16ರಂದು ಮೈಸೂರಿನಲ್ಲಿರುವ ಜಯದೇವ ಆಸ್ಪತ್ರೆಯ ಶಾಖೆಯಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ 200 ಅರ್ಹ ಬಡರೋಗಿಗಳಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಉನ್ನತ ಗುಣಮಟ್ಟದ ಮೆಡಿಕೇಟೆಡ್ ಸ್ಟಂಟ್ಗಳನ್ನು ಉಚಿತವಾಗಿ ಅಳವಡಿಸಲಾಗುವುದು. ಈ ಸೌಲಭ್ಯವನ್ನು ಈಗಾಗಲೇ ಆಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟಿರುವ ರೋಗಿಗಳು ಪಡೆಯಬಹುದು. ಅರ್ಹ ರೋಗಿಗಳು ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಕಡಿಮೆ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದವರು ತಿಳಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಮತ್ತು ಹಣಕಾಸಿನ ಮುಗ್ಗಟ್ಟಿನಿಂದ ಚಿಕಿತ್ಸೆ ಮಾಡಿಸಿಕೊಳ್ಳಲು ನಿಸ್ಸಹಾಯಕರಾಗಿರುವ ರೋಗಿಗಳು ತಮ್ಮ ಹೆಸರನ್ನು ಅಕ್ಟೋಬರ್ 1ರೊಳಗೆ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ದಾಖಲಾತಿ ಮತ್ತು ಹೆಚ್ಚಿನ ಮಾಹಿತಿಗೆ ನಿರ್ದೇಶಕರ ಕಚೇರಿ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್ ಬೆಂಗಳೂರು- 560069. ಬೆಂಗಳೂರು ಶಾಖೆಯ ದೂರವಾಣಿ ಸಂಖ್ಯೆ 8431239166 ಅಥವಾ 080-22977433. ಮೈಸೂರು ಶಾಖೆಯ ದೂ.ಸಂ. 7892293016 ಅಥವಾ 0821- 2336255ಯನ್ನು ಸಂಪರ್ಕಿಸಬಹುದು ಎಂದು ಡಾ.ಸಿ.ಎನ್.ಮಂಜುನಾಥ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.