ಸೆ.22ಕ್ಕೆ ‘ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ’ ಕೃತಿ ಲೋಕಾರ್ಪಣೆ

ಬೆಂಗಳೂರು, ಸೆ. 19: ಲೇಖಕ ಕಾ.ತ.ಚಿಕ್ಕಣ್ಣ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತ ಕುರಿತ ‘ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಸೆ.22ರ ಬೆಳಗ್ಗೆ 11ಕ್ಕೆ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಗ್ರಂಥ ಬಿಡುಗಡೆ ಮಾಡಲಿದ್ದು, ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೇಲ್ಮನೆ ಸದಸ್ಯ ಎಚ್.ಎಂ.ರೇವಣ್ಣ, ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಗ್ರಂಥ ಸಂಪಾದಕ ಕಾ.ತ.ಚಿಕ್ಕಣ್ಣ ಭಾಗವಹಿಸಲಿದ್ದಾರೆ.
ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ’ ಕೃತಿಯಲ್ಲಿ ಪ್ರೊ.ಒಡೆಯರ್ ಡಿ.ಹೆಗ್ಗಡೆ, ಡಾ.ಬಂಜಗೆರೆ ಜಯಪ್ರಕಾಶ್, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಶಶಿಧರ, ಡಿ.ಎನ್.ನರಸಿಂಹರಾಜು, ಟಿ.ಗುರುರಾಜ್, ಪ್ರೊ.ಅಬ್ದುಲ್ ಅಜೀಝ್, ಪಾಟೀಲ ಪುಟ್ಟಪ್ಪ, ವೀರೇಂದ್ರ ಹೆಗ್ಗಡೆ, ಪ್ರೊ.ಚಂದ್ರಶೇಖರ ಪಾಟೀಲ, ಬಿ.ಟಿ.ಲಲಿತಾನಾಯಕ್, ಹಿ.ಶಿ.ರಾಮಚಂದ್ರೇಗೌಡ, ಪುರುಷೋತ್ತಮ ಬಿಳಿಮಲೆ, ಡಾ.ನಟರಾಜ ಹುಳಿಯಾರ್ ಲೇಖನಗಳನ್ನು ಬರೆದಿದ್ದಾರೆ.
ಪ್ರಜಾಪ್ರಭುತ್ವ ಮೌಲ್ಯಗಳ ಸಿದ್ಧಾಂತ ಪ್ರತಿಪಾದಿಸುವ ಜನತಂತ್ರ ಚುನಾವಣೆಯನ್ನು ಎತ್ತ ಕೊಂಡೊಯ್ಯುತ್ತಿದ್ದೇವೆ? ಹಣ, ಜಾತಿ, ತಂತ್ರಗಾರಿಕೆಯಂಬ ಆಮಿಷಕಾರಿ ಮಾನದಂಡಗಳು ಹೇಗೆ ಚುನಾವಣೆಯೆಂಬ ಜನತಾಂತ್ರಿಕ ವ್ಯವಸ್ಥೆಯನ್ನು ಗೆಲ್ಲುತ್ತಿವೆ? ಸಮಾಜವನ್ನು ಸಮಾನತೆಗೊಳಿಸುವ ಕಾರ್ಯಕ್ರಮಗಳು ಹೇಗೆ ಹಿನ್ನೆಲೆಗೆ ಸರಿಯುತ್ತಿವೆ ? ಎಂಬ ಕುರಿತು ಲೇಖನಗಳಿವೆ ಎಂದು ಪ್ರಕಟನೆ ತಿಳಿಸಿದೆ.