ಇದು ಗಾಂಧಿ ಭಾರತವೇ?, ಗೋಡ್ಸೆ ಭಾರತವೇ ?: ಮೋದಿ ಸರಕಾರದ ಬಗ್ಗೆ ಮೆಹಬೂಬಾ ಪುತ್ರಿ ಇಲ್ತಿಝಾ ಪ್ರಶ್ನೆ

ಫೋಟೊ ಕೃಪೆ: indiatoday.in
ಜಮ್ಮುಕಾಶ್ಮೀರ, ಸೆ. 20: ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಾಗೂ ರಾಜ್ಯದ ಸ್ಥಾನಮಾನ ಹಿಂದೆ ತೆಗೆದುಕೊಂಡಿರುವ ನರೇಂದ್ರ ಮೋದಿ ಸರಕಾರದ ಕ್ರಮವನ್ನು ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಝಾ ಮುಫ್ತಿ ಟೀಕಿಸಿದ್ದಾರೆ.
ಮುಂಬೈಯಲ್ಲಿ ನಡೆದ ‘ಇಂಡಿಯಾ ಟುಡೆ’ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾಶ್ಮೀರದ ಮುಂದಿನ ದಾರಿ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಶ್ಮೀರಕ್ಕೆ ಸಂಬಂಧಿಸಿದ ನಿರ್ಧಾರವನ್ನು ಕೇಂದ್ರ ಸರಕಾರ ಹಿಂದೆ ತೆಗೆದುಕೊಳ್ಳಬೇಕು ಎಂದರು. ಕಾಶ್ಮೀರದಲ್ಲಿ ಸಂವಹನ ಹಾಗೂ ಸಂಚಾರ ನಿರ್ಬಂಧದ ಕುರಿತು ಮಾತನಾಡಿದ ಅವರು, ಇದು ‘ಗಾಂಧಿ ಭಾರತವೇ ? ಅಥವಾ ಗೋಡ್ಸೆ ಭಾರತವೇ?’ ಎಂದು ಪ್ರಶ್ನಿಸಿದರು.
‘‘ನಾಗರಿಕ ಸಮಾಜದಲ್ಲಿ ಚರ್ಚೆ ಇರಬೇಕು. ಕಾಶ್ಮೀರಿಗಳು ಈ ಚರ್ಚೆಯ ಭಾಗವಾಗಬೇಕು. ನೀವು ನಮ್ಮೊಂದಿಗೆ ಸಮಾಲೋಚನೆ ಕೂಡ ನಡೆಸಿಲ್ಲ. ನೀವು ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ’’ ಎಂದು ಇಲ್ತಿಜಾ ಪ್ರಶ್ನಿಸಿದ್ದಾರೆ.
ಕಾಶ್ಮೀರಿಗಳು ಕೆಲವು ತಿಂಗಳಿಂದ ಪಂಜರದಲ್ಲಿ ಇದ್ದಾರೆ. ನೀವು ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೀರಿ. ನಾವು ಮೊದಲು ಪ್ರಸ್ತುತದ ಬಗ್ಗೆ ಮಾತನಾಡಲು ಸಾಧ್ಯವೇ ? ನಾವು ಮಾನವೀಯತೆಯ ಬಿಕ್ಕಟ್ಟು, ಆರ್ಥಿಕ ಬಿಕ್ಕಟ್ಟು, ಮಾನಸಿಕ ಬಿಕ್ಕಟ್ಟು, ಜನರು ಒಳಗಾಗುತ್ತಿರುವ ಸಂಕಷ್ಟದ ಬಗ್ಗೆ ಮಾತನಾಡಲು ಸಾಧ್ಯವೇ ? ಎಂದು ಇಲ್ತಿಜಾ ಪ್ರಶ್ನಿಸಿದ್ದಾರೆ.