ಉಡುಪಿ: ಬ್ಯಾಂಕ್, ಅಂಚೆ ಕಚೇರಿಯಲ್ಲಿ ಆಧಾರ್ ನೊಂದಣಿ, ತಿದ್ದುಪಡಿ ಸೌಲಭ್ಯ
ಉಡುಪಿ, ಸೆ.21:ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ಜನ್ಮ ದಿನಾಂಕ, ವಿಳಾಸದ ಬದಲಾವಣೆ ಅಥವಾ ತಿದ್ದುಪಡಿ ಮಾಡುವ ಸಲುವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಅಂಚೆ ಇಲಾಖೆಗಳಲ್ಲಿ ಹಾಗೂ ಬ್ಯಾಂಕ್‌ಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳು ಕೆಲಸ ನಿರ್ವಹಿಸುತ್ತಿದ್ದು, ಆಧಾರ್ ಕಾರ್ಡ್‌ಗಳನ್ನು ನೋಂದಣಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಪರೇಟರ್‌ಗಳು ಅಂಚೆ ಇಲಾಖೆಯ ಕೆಲಸದೊಂದಿಗೆ ಪ್ರತಿ ದಿನಕ್ಕೆ 15ರಿಂದ 20 ಜನರ ನೋಂದಣಿ ತಿದ್ದುಪಡಿ ಮಾಡುತಿದ್ದಾರೆ. ಹಾಗೂ ಟೋಕನ್‌ಗಳನ್ನು ನೀಡಿ ಮುಂದಿನ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.
ಅಲ್ಲದೇ ತಾಲೂಕು ಕಚೇರಿ ಕುಂದಾಪುರ, ಕಾರ್ಕಳ, ಉಡುಪಿ, ಬ್ರಹ್ಮಾವರ, ಬೈಂದೂರು, ಕಾಪು, ನಾಡ ಕಚೇರಿಗಳಾದ ಕೋಟ, ವಂಡ್ಸೆ, ಅಜೆಕಾರು ಇಲ್ಲಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಯಲ್ಲಿರುವ ಸ್ಪಂದನ ಕೇಂದ್ರಗಳಲ್ಲಿ ಸಾರ್ವಜನಿಕರು ಹೊಸತಾಗಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಭೇಟಿ ನೀಡಿ ಇದರ ಸುಪಯೋಗ ಪಡೆದುಕೊಳ್ಳಬಹುದು.
ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗೆ ಹೆಚ್ಚಿನ ಬೇಡಿಕೆ ಇರುವು ದರಿಂದ ಟೋಕನ್ ನೀಡಿ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







