ಆಂಗ್ಲ ಮಾಧ್ಯಮದ ಪಠ್ಯ ಪುಸ್ತಕ ಒದಗಿಸುವಂತೆ ಶಿಕ್ಷಣ ಸಚಿವರಿಗೆ ಪತ್ರ
ದಡ್ಡಲಕಾಡು ವಿದ್ಯಾರ್ಥಿನಿಯ ಪತ್ರಕ್ಕೆ ಸ್ಪಂದಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಬಂಟ್ವಾಳ, ಸೆ. 21: ಸರಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳ ಪತ್ರಕ್ಕೆ ಸ್ವತಃ ಶಿಕ್ಷಣ ಸಚಿವರೇ ಸ್ಪಂದಿಸಿ 24 ಗಂಟೆಯೊಳಗೆ ಆಂಗ್ಲ ಮಾಧ್ಯಮದ ಪಠ್ಯ ಪುಸ್ತಕ ಒದಗಿಸುವಂತೆ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶ ಹೊರಡಿಸಿದ್ದಾರೆ.
ಸಚಿವರ ಆದೇಶದನ್ವಯ ಕೇವಲ ಒಂದೇ ದಿನದಲ್ಲಿ ಪಠ್ಯ ಪುಸ್ತಕ ಶಾಲೆಗೆ ತಲುಪಿದ್ದು ವಿದ್ಯಾರ್ಥಿಗಳ ಕೈ ಸೇರಿದೆ. ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ಚರಣ್ಯ ಶಿಕ್ಷಣ ಸಚಿವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಈ ಶೈಕ್ಷಣಿಕ ವರ್ಷದಲ್ಲಿ ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕೆಗೆ ಸರಕಾರ ಅವಕಾಶ ಮಾಡಿಕೊಟ್ಟಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಒಂದನೇ ತರಗತಿಯ 30 ಮಕ್ಕಳಿಗೆ ಮಾತ್ರ ಪಠ್ಯಪುಸ್ತಕವನ್ನು ವಿತರಣೆ ಮಾಡಿತ್ತು. ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ 78 ಮಂದಿ ವಿದ್ಯಾರ್ಥಿಗಳು ಪಠ್ಯ ಪುಸ್ತಕವಿಲ್ಲದೆ ವಂಚಿತರಾಗಿದ್ದರು. ಅಲ್ಲದೆ ಇದೇ ಶಾಲೆಯಲ್ಲಿ ಇತರ ತರಗತಿಗಳಿಗೂ ಎಲ್ಲಾ ಪುಸ್ತಕಗಳು ಪೂರೈಕೆಯಾಗದೆ ತೊಂದರೆಗೊಳಗಾಗಿದ್ದ ವಿದ್ಯಾರ್ಥಿಗಳು ಯಾವಾಗ ಪುಸ್ತಕ ಕೈ ಸೇರುತ್ತದೆ ಎಂದು ಕಾಯುವಂತಾಗಿತ್ತು. ಈ ಸಮಸ್ಯೆಯ ಬಗ್ಗೆ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಚರಣ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದು ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದಳು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಮೂಲಕ ಈ ಪತ್ರವನ್ನು ಶಿಕ್ಷಣ ಸಚಿವರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಳು. ವಿದ್ಯಾರ್ಥಿನಿಯ ಪತ್ರಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು 24 ಗಂಟೆಯೊಳಗಾಗಿ ಪಠ್ಯ ಪುಸ್ತಕವನ್ನು ಸಂಬಂಧಪಟ್ಟ ಶಾಲೆಯ ವಿದ್ಯಾರ್ಥಿಗಳ ಕೈ ಸೇರುವ ನಿಟ್ಟಿನಲ್ಲಿ ತಕ್ಷಣ ಕ್ರಮ ಜರಗಿಸುವಂತೆ ಪಠ್ಯ ಪುಸ್ತಕ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿ, ವರದಿ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಶುಕ್ರವಾರ ಬೆಳಿಗ್ಗೆಯೇ ಎಲ್ಲಾ ಪಠ್ಯ ಪುಸ್ತಕಗಳು ಶಾಲೆಗೆ ತಲುಪಿದ್ದು ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕರು ವಿತರಿಸಿದ್ದಾರೆ.






.jpg)
.jpg)

