ಪರಿಶಿಷ್ಟ ನೌಕರರ ಭಡ್ತಿಯಲ್ಲಿ ಅನ್ಯಾಯ ಆರೋಪ: ಸರಿಪಡಿಸಲು ಮನವಿ
ಬೆಂಗಳೂರು, ಸೆ.23: ರಾಜ್ಯದಲ್ಲಿ ಮೀಸಲಾತಿ ಆಧಾರದಲ್ಲಿ ಭಡ್ತಿ ಹೊಂದಿರುವ ಸರಕಾರಿ ನೌಕರರಿಗೆ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮದಡಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪಗೆ ರಾಜ್ಯ ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರ ಸಂಘ ಮನವಿ ಮಾಡಿದೆ.
ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಲ್ಲಿ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017 ರ ಎಲ್ಲ ಪ್ರಾಧಿಕಾರಗಳ ಕೇಡರ್‌ಗಳಲ್ಲಿ ಅಂತಿಮ ಜೇಷ್ಠತಾ ಪಟ್ಟಿ ತಯಾರಿಸುವ ಪ್ರಕ್ರಿಯೆಯನ್ನು 2019 ಜೂನ್ 15 ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ, ಗಡುವು ಮುಗಿದು ಮೂರು ತಿಂಗಳು ಆದರೂ ಇನ್ನೂ ಬಹುತೇಕ ಇಲಾಖೆಗಳಲ್ಲಿ ಪ್ರಕ್ರಿಯೆಯನ್ನೇ ಮುಗಿಸಿಲ್ಲ ಎಂದು ಆಪಾದಿಸಿದ್ದಾರೆ.
ಸರಕಾರದ ಉಲ್ಲೇಖ ಹಾಗೂ ಆದೇಶವನ್ನು ಪಾಲಿಸುವ ಬದಲಿಗೆ ಕೆಲವು ಇಲಾಖೆಗಳ ಅಧಿಕಾರಿಗಳು ಆದೇಶದ ಪ್ರತಿಗಳನ್ನು ಟ್ಯಾಗ್ ಮಾಡುವ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಇದರಿಂದ ಭಡ್ತಿ ಮೀಸಲಾತಿ ಕಾಯ್ದೆಯಡಿ ಮುಂಭಡ್ತಿ ಪಡೆಯಬೇಕಿರುವವರಿಗೆ ಅನ್ಯಾಯವಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ಸಿಎಂ ಬಳಿ ಅಳಲು ತೋಡಿಕೊಂಡಿದ್ದಾರೆ.
ನೌಕರರಿಗೆ ನ್ಯಾಯ ಒದಗಿಸಲು ಎಸ್ಸಿ-ಎಸ್ಟಿ ಅಧಿಕಾರಿಗಳು ಮತ್ತು ನೌಕರರಿಗೆ ನಿರ್ದಿಷ್ಟ ಗಡುವಿನೊಳಗೆ ಎಲ್ಲ ಇಲಾಖೆಗಳು ಮತ್ತು ಸರಕಾರದ ಅಧೀನ ಮಂಡಳಿಗಳು ಮತ್ತು ಪ್ರಾಧಿಕಾರಗಳು, ಸ್ವಾಯತ್ತ ಸಂಸ್ಥೆಗಳು ಆಯಾ ಕೇಡರ್‌ನ ಅಂತಿಮ ಜೇಷ್ಠತಾ ಪಟ್ಟಿಗಳನ್ನು ಹೊರಡಿಸಿ ಮುಂಭಡ್ತಿ ನೀಡಲು ಸರಕಾರದಿಂದ ಸ್ಪಷ್ಟ ಆದೇಶ ನೀಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಅಂತಿಮ ದಿನಾಂಕ ನಿಗದಿ ಮಾಡಿ ಎಲ್ಲ ಇಲಾಖೆಗಳಿಗೆ ಮುಂಭಡ್ತಿ ಪ್ರಕ್ರಿಯೆ ನಡೆಸಲು ಆದೇಶ ನೀಡಬೇಕು. ಆಯಾ ಕೇಡರ್‌ನಲ್ಲಿ ಮುಂಭಡ್ತಿ ನೀಡುವಾಗ 1979ರ ರೋಸ್ಟರ್ ನಿಯಮ ಅನುಸರಿಸಲು ಅವಕಾಶ ಕಲ್ಪಿಸಬೇಕು. ಭಡ್ತಿ ನೀಡುವಾಗ ಜೇಷ್ಠತೆಗೆ ಅನುಸಾರವಾಗಿ ಅನ್ ರಿಸರ್ವ್ ಬಿಂದುವಿಗೆ ಎದುರಾಗಿ ಮುಂಭಡ್ತಿ ಹೊಂದಲು ಅರ್ಹತೆಯಿದ್ದಲ್ಲಿ ಈ ಬಿಂದುವನ್ನು ಪರಿಗಣಿಸಬೇಕು.
ಅನ್ ರಿಸರ್ವ್ ಬಿಂದುವಿಗೆ ಎದುರಾಗಿ ಮುಂಭಡ್ತಿ ಹೊಂದಿದ ಎಸ್ಸಿ-ಎಸ್ಟಿ ನೌಕರರನ್ನು ಶೇ.15 ಮತ್ತು ಶೇ.3ರ ಪ್ರಾತಿನಿಧ್ಯಕ್ಕೆ ಲೆಕ್ಕ ಹಾಕಬಾರದು. ಅವರನ್ನು ಸಾಮಾನ್ಯ ಬಿಂದುವಿಗೆ ಪರಿಗಣಿಸಬೇಕು. 1979ರ ರೋಸ್ಟರ್ ನಿಯಮದ ಅನ್ ರಿಸರ್ವ್‌ಡ್ ಬಿಂದುವಿಗೆ ಎದುರಾಗಿ ಮುಂಭಡ್ತಿ ಪಡೆದಿದ್ದ ಕೆಲವು ಅಧಿಕಾರಿ ನೌಕರರನ್ನು ಪವಿತ್ರ ಪ್ರಕರಣದಲ್ಲಿ ಹಿಂಭಡ್ತಿಗೊಳಿಸಲಾಗಿದೆ.
ಅಂತಹ ನೌಕರರಿಗೆ ಹಿಂಭಡ್ತಿಗೊಳಿಸಿದ ದಿನಾಂಕದ ಪೂರ್ವದಲ್ಲಿ ಮುಂಭಡ್ತಿ ಹೊಂದಲು ಇರುವ ಅರ್ಹತೆಯನ್ನು ಪರಿಗಣಿಸಿ ಮುಂದಿನ ಹುದ್ದೆಗಳಿಗೆ ಅರ್ಹತಾ ದಿನಾಂಕದಿಂದ ಅನ್ವಯವಾಗುವಂತೆ ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಂಭಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ಅಧಿನಿಯಮ, 1973ರ ಕಲಂ 4, 5, 6 ಮತ್ತು 7ನ್ನು ಕಲಂ 9 ರೊಡನೆ ಗಮನಿಸಿ ಮುಂಭಡ್ತಿ ನೀಡಬೇಕು.
ಪರಿಶಿಷ್ಟ ನೌಕರರ ಹಲವು ಬೇಡಿಕೆಗಳ ಕುರಿತು ಸರಕಾರ ಗಮನ ಹರಿಸಬೇಕು. ನೌಕರರಿಗೆ ಸಿಗಬೇಕಾದ ಮುಂಭಡ್ತಿ ನೀಡಲು ಎಲ್ಲ ರೀತಿ ಕ್ರಮ ವಹಿಸಬೇಕು ಎಂದು ಈಗಾಗಲೇ ಸಿಎಂಗೆ ಮನವಿ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೂ ಮನವಿ ಸಲ್ಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.