ಜಾಧವ್‌ಪುರ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ: ವಿದ್ಯಾರ್ಥಿಗಳು, ಪೊಲೀಸರ ಮಧ್ಯೆ ಕಿತ್ತಾಟ

ಕೋಲ್ಕತಾ,ಸೆ.23: ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮೇಲೆ ಗುರುವಾರ ನಡೆದ ಹಲ್ಲೆಯನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕೋಲ್ಕತಾದ ಜಾಧವ್‌ಪುರ ವಿಶ್ವವಿದ್ಯಾಲಯ (ಜೆಯು) ದಲ್ಲಿ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು.
ಸ್ಥಳಕ್ಕಾಗಮಿಸಿದ ಪೊಲೀಸರು ವಿಶ್ವವಿದ್ಯಾಲಯದ ಗೇಟ್‌ನ ಹೊರಗೆ ಅಡ್ಡವಾಗಿ ಬ್ಯಾರಿಕೇಡ್‌ಗಳನ್ನು ಇಡುತ್ತಿದ್ದಂತೆ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲುಗಳನ್ನು ಎಸೆಯಲು ಆರಂಭಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಬಾಬುಲ್ ಸುಪ್ರಿಯೊ ಮೇಲೆ ಜೆಯುನಲ್ಲಿ ಸಿಪಿಎಂನ ವಿದ್ಯಾರ್ಥಿ ವಿಭಾಗ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯ ವೀಡಿಯೊದಲ್ಲಿ, ವಿದ್ಯಾರ್ಥಿಗಳ ದೊಡ್ಡ ಗುಂಪಿನಿಂದ ಸುತ್ತುವರಿಯಲ್ಪಟ್ಟಿದ್ದ ಸಚಿವರ ಬಟ್ಟೆಯ ಗುಂಡಿಗಳು ತೆರೆದುಕೊಂಡಿದ್ದು ಅವರನ್ನು ಅತ್ತಿಂದಿತ್ತ ದೂಡುತ್ತಿರುವುದು ದಾಖಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಅವರ ಕಾರಿನಲ್ಲಿ ಸುಪ್ರಿಯೋ ಅವರನ್ನು ಜೆಯುನಿಂದ ಹೊರಗೆ ಕರೆತರಲಾಗಿತ್ತು. ವಿಶ್ವವಿದ್ಯಾಲಯದ ಆಡಳಿತವರ್ಗ ಬಯಸಿದ್ದರೆ ಪರಿಸ್ಥಿತಿಯನ್ನು ಸುಲಭವಾಗಿ ಹತೋಟಿಗೆ ತರಬಹುದಿತ್ತು ಎಂದು ಸುಪ್ರಿಯೊ ಅಭಿಪ್ರಾಯಿಸಿದ್ದಾರೆ.







