ವಕೀಲರ ನಿಯಂತ್ರಿಸಲು ವಿಫಲವಾದ ಉತ್ತರ ಪ್ರದೇಶಕ್ಕೆ ಸುಪ್ರೀಂ ತರಾಟೆ

ಹೊಸದಿಲ್ಲಿ,ಸೆ.23: ತನ್ನ ವಕೀಲರನ್ನು ನಿಯಂತ್ರಣದಲ್ಲಿಡಲು ವಿಫಲವಾಗಿರುವ ಉತ್ತರ ಪ್ರದೇಶದ ಗೃಹ ಕಾರ್ಯದರ್ಶಿಯನ್ನು ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯ ಜಾರಿ ಮಾಡಿರುವ ನೋಟಿಸ್‌ಗೆ ಪ್ರತಿಕ್ರಿಯಿಸಲು ವಿಫಲವಾಗಿರುವ ಮುಖ್ಯಮಂತ್ರಿ ಆದಿತ್ಯನಾಥ್ ಸರಕಾರವನ್ನು ಪ್ರತಿನಿಧಿಸುವ ವಕೀಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಒಂದು ವೇಳೆ ಸರಕಾರ ತನ್ನ ವಕೀಲರನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗದಿದ್ದರೆ ನೀವೇ ನ್ಯಾಯಾಲಯದಲ್ಲಿ ವಾದ ಮಂಡಿಸಬೇಕಾದೀತು ಎಂದು ಗೃಹ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದ್ದಾರೆ. “24ರ ಹರೆಯದ ವ್ಯಕ್ತಿಯೊಂದಿಗೆ ನನ್ನ ವಿವಾಹ ಷರಿಅತ್ ಕಾನೂನು ಪ್ರಕಾರ ಸಿಂಧುವಾಗಿದೆ” ಎಂದು 16ರ ಹರೆಯದ ಬಾಲಕಿಯ ವಾದದ ವಿಚಾರಣೆಯನ್ನು ನಡೆಸುವ ವೇಳೆ ಸುಪ್ರೀಂ ಕೋರ್ಟ್ ಈ ಎಚ್ಚರಿಕೆ ನೀಡಿದೆ. ಇದಕ್ಕೂ ಮೊದಲು ಅಲಹಾಬಾದ್ ಉಚ್ಚ ನ್ಯಾಯಾಲಯ ಬಾಲಕಿ ಪ್ರಾಪ್ತ ವಯಸ್ಸಿನವಳಾಗದಿರುವುದರಿಂದ ಈ ವಿವಾಹ ಅಸಿಂಧುವಾಗಿದೆ ಎಂದು ಘೋಷಿಸಿತ್ತು.
ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಬಾಲಕಿ ಪ್ರಶ್ನಿಸಿದ್ದರು. ಸದ್ಯ ಬಾಲಕಿಯರ ಆಶ್ರಯಧಾಮದಲ್ಲಿರುವ ಬಾಲಕಿ, ಈ ಒತ್ತಾಯಪೂರ್ವಕ ಬಂಧನದಿಂದ ಸಮಾನತೆಯ ತನ್ನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಹಾಗಾಗಿ ಅದು ಅಕ್ರಮ ಬಂಧನಕ್ಕೆ ಸಮವಾಗುತ್ತದೆ. ತಾನು ಯೌವ್ವನಕ್ಕೆ ತಲುಪಿದ್ದು ಷರಿಅತ್ ಪ್ರಕಾರ ವಿವಾಹವಾಗಲು ಸಮರ್ಥಳಾಗಿದ್ದೇನೆ ಎಂದು ತಿಳಿಸಿದ್ದಾರೆ.





