ಆಸಾರಾಮ್ ಬಾಪು ಮನವಿ ತಿರಸ್ಕರಿಸಿದ ಜೋಧಪುರ ಹೈಕೋರ್ಟ್

ಜೋಧಪುರ, ಸೆ. 23: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ತನಗೆ ವಿಧಿಸಿದ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಸ್ವಘೋಷಿತ ದೇವ ಮಾನವ ಅಸಾರಾಮ್ ಬಾಪು ಸಲ್ಲಿಸಿದ ಮನವಿಯನ್ನು ಜೋಧಪುರ ಉಚ್ಚ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಸಂತ್ರಸ್ತೆ ಅಪ್ರಾಪ್ತೆ ಅಲ್ಲ. ಆದುದರಿಂದ ತಮ್ಮ ಕಕ್ಷಿಗಾರನನ್ನು ಪೋಕ್ಸೊ ನಿಯಮದ ಅಡಿ ಶಿಕ್ಷಿಸಬಾರದು ಎಂದು ಅಸಾರಾಮ್ ಬಾಪು ಅವರನ್ನು ಪ್ರತಿನಿಧಿಸಿದ ವಕೀಲರಾದ ಶಿರಿಶ್ ಗುಪ್ತಾ ಹಾಗೂ ಪ್ರದೀಪ್ ಚೌಧರಿ ವಾದಿಸಿದ್ದರು. ಮನವಿ ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಸಂದೀಪ್ ಹಾಗೂ ವಿನೀತ್ ಕುಮಾರ್ ಮಾಥುರ್, ಅಪರಾಧ ನಡೆಯುವ ಸಂದರ್ಭ ಸಂತ್ರಸ್ತೆ 18 ವರ್ಷಗಳ ಕೆಳಗಿನವಳಾಗಿದ್ದಳು ಎಂದು ವಿಚಾರಣಾ ನ್ಯಾಯಾಲಯದಲ್ಲಿ ಸಾಬೀತಾಗಿದೆ ಎಂದರು.
ಆಗಸ್ಟ್ 20ರಂದು ಉಚ್ಚ ನ್ಯಾಯಾಲಯ ಮನವಿ ವಿಚಾರಣೆ ಮುಂದೂಡಿತ್ತು. ಜೋಧಪುರದ ಸಮೀಪದ ಮಾನಾಯಿ ಗ್ರಾಮದಲ್ಲಿ 2013 ಆಗಸ್ಟ್‌ನಲ್ಲಿ ಅಪ್ರಾಪ್ತೆ ಮೇಲೆ ಆಸಾರಾಮ್ ಅತ್ಯಾಚಾರ ಎಸಗಿರುವುದು ಸಾಬೀತಾಗಿತ್ತು. ಕಳೆದ ವರ್ಷ ಎಪ್ರಿಲ್‌ನಲ್ಲಿ ಜೋಧಪುರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನ್ಯಾಯಾಲಯ ಆಸಾರಾಮ್‌ಗೆ ಜೀವಾವದಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಅಸಾರಾಮ್‌ನನ್ನು ಪ್ರಸ್ತುತ ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.





