‘ಕೆಶಿಪ್’ ಕಾಮಗಾರಿಗಳನ್ನು ಪೂರ್ಣಗೊಳಿಸಲು ಡಿಸಿಎಂ ಗೋವಿಂದ ಕಾರಜೋಳ ಸೂಚನೆ

ಬೆಂಗಳೂರು. ಸೆ.23: ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಕೆಶಿಪ್)ಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತಗತಿ ಪೂರ್ಣಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಂದಿಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಕೆಶಿಪ್, ರಾಜ್ಯ ನಿರ್ಮಾಣ ನಿಗಮ(ಕೆಎಸ್‌ಸಿಸಿ)ದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮಾತನಾಡಿದ ಅವರು, ಕೆಶಿಪ್ ಮೊದಲ ಹಂತದಲ್ಲಿ 4,615ಕಿ.ಮೀ.ಉದ್ದದ ರಸ್ತೆ ನಿರ್ಮಿಸುವ ಗುರಿ ಹೊಂದಿದ್ದು, ಆ ಪೈಕಿ 4,162 ಕಿ.ಮೀ ರಸ್ತೆಯನ್ನು ಪೂರ್ಣಗೊಳಿಸಲಾಗಿದೆ.
ಎರಡನೆ ಹಂತದಲ್ಲಿ 4,522ಕೋಟಿ ರೂ.ವೆಚ್ಚದ 1,195 ಕಿ.ಮೀ.ಉದ್ದದ ರಸ್ತೆ ನಿರ್ಮಾಣಕ್ಕೆ ಗುರಿಹೊಂದಿದ್ದು, ಆ ಪೈಕಿ 1,163 ಕಿ.ಮೀ.ಉದ್ದದ ರಸ್ತೆ ನಿರ್ಮಿಸಲಾಗಿದೆ. ಸೇಫ್ ಕಾರಿಡಾರ್ ಡೆಮಾನ್‌ಸ್ಟ್ರೇಷನ್ ಪ್ರೊಜೆಕ್ಟ್ ಯೋಜನೆಯಡಿ ಬೆಳಗಾವಿಯಿಂದ ಎರಗಟ್ಟಿಯವರೆಗೆ ನಿರ್ಮಿಸಲಾಗಿದ್ದು, ಈ ರಸ್ತೆ ಮಾರ್ಗದಲ್ಲಿ ಅಪಘಾತಗಳ ಪ್ರಮಾಣವು ಶೇ.65 ಪ್ರಮಾಣಕ್ಕಿಂತ ಕಡಿಮೆಯಾಗಿದೆ.
ಇದಕ್ಕೆ ಕೇಂದ್ರ ಸರಕಾರ ಹಾಗೂ ವಿಶ್ವಬ್ಯಾಂಕ್‌ನಿಂದ ಪ್ರಶಸ್ತಿಯೂ ದೊರೆತಿದೆ. ಅಲ್ಲದೆ ಇದೆ ಮಾದರಿಯಲ್ಲಿ ಇತರ ರಾಜ್ಯಗಳಲ್ಲಿ ರಸ್ತೆಗಳನ್ನು ನಿರ್ಮಿಸಲು ವರದಿ ಪಡೆದುಕೊಳ್ಳಲು ಮುಂದಾಗಿರುವುದು ಹೆಮ್ಮೆಯ ಸಂಗತಿ. ಕೆಆರ್‌ಡಿಎಲ್ ಸಹಾಯ ಧನದಿಂದ ನಿರ್ಮಿಸುತ್ತಿರುವ ವಿವಿಧ 6 ಕಾಮಗಾರಿಗಳು ಶೇ.94ರಷ್ಟು ಪೂರ್ಣಗೊಂಡಿವೆ.
ನೆರೆಪೀಡಿತ ಪ್ರದೇಶಗಳಲ್ಲಿ ಸಂಪರ್ಕ ರಸ್ತೆ, ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಳ್ಳಬೇಕು. ಈ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್, ಕೆಶಿಪ್ ಕಾರ್ಯದರ್ಶಿ ಕೆ.ಎಸ್.ಕೃಷ್ಣರೆಡ್ಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.