ಜಾನುವಾರು ಶಿಬಿರ ವಿಚಾರ: ಕೋರ್ಟ್‌ನ ದಾರಿ ತಪ್ಪಿಸುತ್ತಿದ್ದೀರಿ- ಸರಕಾರದ ವಿರುದ್ಧ ಹೈಕೋರ್ಟ್ ಆಕ್ರೋಶ

ಬೆಂಗಳೂರು, ಸೆ.23: ರಾಜ್ಯದ ಬರ ನಿರ್ವಹಣೆ ವಿಚಾರದಲ್ಲಿ ಜಾನುವಾರು ಶಿಬಿರಗಳನ್ನು ತೆರೆದಿರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕೆ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೈಕೋರ್ಟ್, ಸೆ.26ರಂದು ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿಗೆ ಖುದ್ದು ಹಾಜರಿರಲು ಆದೇಶಿಸಿತು.
ಈ ಕುರಿತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರಿನ ಎ.ಮಲ್ಲಿಕಾರ್ಜುನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
126 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ, 65 ತಾಲೂಕುಗಳಲ್ಲಿ ಜಾನುವಾರು ಶಿಬಿರಗಳನ್ನು ತೆರೆಯಲಾಗಿದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಿರಿ. ಆದರೆ, ಕಾನೂನು ಸೇವೆಗಳ ಪ್ರಾಧಿಕಾರ 20 ತಾಲೂಕುಗಳಲ್ಲಿ ಪರಿಶೀಲನೆ ನಡೆಸಿದಾಗ 20ರ ಫೈಕಿ 14 ತಾಲೂಕುಗಳಲ್ಲಿ ಜಾನುವಾರು ಶಿಬಿರಗಳೆ ಇಲ್ಲ ಎಂದು ಮಾಹಿತಿ ಬಂದಿದೆ. ಆದರೆ, ನೀವು(ಸರಕಾರ) ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಕೋರ್ಟ್‌ನ ದಾರಿ ತಪ್ಪಿಸುತ್ತಿದ್ದಿರಿ. ಇದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಕಿಡಿಕಾರಿದ ನ್ಯಾಯಪೀಠವು ಕೋರ್ಟ್‌ಗೆ ಈ ಹಿಂದೆ ಸಲ್ಲಿಸಿರುವ ತಪ್ಪು ಪ್ರಮಾಣ ಪತ್ರದ ಕುರಿತು ವಿವರಣೆ ನೀಡಲು ತಾಕೀತು ಮಾಡಿತು. ಇದೇ ಪ್ರಕರಣದಲ್ಲಿ ಅರ್ಜಿದಾರರಿಗೆ ದೂರವಾಣಿ ಕರೆ ಮಾಡಿದ್ದ ಗುಪ್ತಚರ ದಳದ ತುಮಕೂರು ಅಧಿಕಾರಿ ಸಿದ್ದಗಂಗಪ್ಪಗೂ ಖುದ್ದು ಹಾಜರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಬರಗಾಲ ಪೀಡಿತ ಪ್ರದೇಶಗಳಲ್ಲಿ ತೆರೆಯಲಾಗಿರುವ ಸಣ್ಣ ಸಣ್ಣ ಶಿಬಿರಗಳನ್ನು ಈಗಾಗಲೇ ರಾಜ್ಯ ಸರಕಾರ ಬಂದ್ ಮಾಡಿದೆ ಪೀಠಕ್ಕೆ ತಿಳಿಸಿದರು.







