ಸೆ.24ರಿಂದ ‘ಸರ್ವಜನರ ಸಂವಿಧಾನ ಸಮಾವೇಶ’
ಬೆಂಗಳೂರು, ಸೆ. 23: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿರುವುದನ್ನು ಖಂಡಿಸಿ ‘ಸರ್ವಜನರ ಸಂವಿಧಾನ ಸಮಾವೇಶ’ವನ್ನು ಸೆ.24ರಿಂದ ಅ.31ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಸಂವಿಧಾನದ ಆಶಯದಂತೆ ಬಡವರಿಗೆ, ಅವಕಾಶ ವಂಚಿತ ಸಮುದಾಯದವರಿಗೆ ಮೀಸಲು ಸಿಗುತ್ತಿಲ್ಲ. ಅಲ್ಲದೇ ಮೀಸಲಾತಿಯಿಂದ ಪ್ರತಿಭೆ ಸಾಮರ್ಥ್ಯ ಹಾಳಾಗುತ್ತದೆ ಎಂದು ಅಧಿಕಾರದಲ್ಲಿರುವ ಕೆಲ ವರ್ಗಗಳು ಬಿಂಬಿಸಿ ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟು ಮಾಡುತ್ತಿವೆ. ಜತೆಗೆ ಸಂವಿಧಾನದ ಅನೇಕ ವಿಧಿಗಳು ಜಾರಿಯಾಗದೇ ಕೇವಲ ಉಳ್ಳವರ ಹಿತ ಕಾಯುವಂತಹ ವಾತಾವರಣ ಸೃಷ್ಟಿಯಾಗುತ್ತಿದೆ ಎಂದರು.
ಸಾಮಾಜಿಕವಾಗಿ ಹಿಂದುಳಿದವರ ಅನುಕೂಲಕ್ಕಾಗಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಸಾಮಾಜಿಕ ನ್ಯಾಯದ ಮೀಸಲಾತಿ ಜಾರಿಗೊಳಿಸಿದ್ದರು. ಇಂದು ಆ ಮೀಸಲಾತಿಗೆ 100 ವರ್ಷ ಪೂರೈಸಿರುವ ಹಿನ್ನೆಲೆ ಅವರ ಸ್ಮರಾಣಾರ್ಥ ಹಾಗೂ ಅವಕಾಶ ವಂಚಿತರಿಗೆ ಮೀಸಲು ಸಿಗದಂತಹ ಸ್ಥಿತಿ ಖಂಡಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವುದು. ಬಗರ್ ಹುಕಂ ಸಾಗುವಳಿದಾರರಿಗೆ ಸಾಗುವಳಿ ಪಟ್ಟ ನೀಡಬೇಕು. ಎಸ್ಸಿ, ಎಸ್ಟಿಗೆ ಭೂ ಸುಧಾರಣೆಯಡಿ ಶೇ.50ರಷ್ಟು ಭೂಮಿ ಹಂಚಿಕೆಯಾಗಬೇಕು. ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಆಗ್ರಹಿಸಿದರು.







