ಮದುವೆ ಮನೆ ಮೇಲೆ ಸೇನಾ ದಾಳಿ: 35 ನಾಗರಿಕರ ಸಾವು
ಕಾಬೂಲ್, ಸೆ. 23: ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತದಲ್ಲಿ ಸರಕಾರಿ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 35 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 13 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಆತ್ಮಹತ್ಯಾ ಬಾಂಬರ್ ಗಳಿಗೆ ತರಬೇತಿ ನೀಡಲು ತಾಲಿಬಾನ್ ಬಳಸುತ್ತಿದ್ದ ಮನೆಯೊಂದರ ಮೇಲೆ ಅಫ್ಘಾನ್ ಸೈನಿಕರು ರವಿವಾರ ರಾತ್ರಿ ನಡೆದ ದಾಳಿಯ ವೇಳೆ ಈ ಸಾವುನೋವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ದಾಳಿಯ ವೇಳೆ ಗುರಿಯ ಪಕ್ಕದ ಕಟ್ಟಡವೊಂದರಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿತ್ತು ಹಾಗೂ ಆ ಕಟ್ಟಡವೂ ದಾಳಿಯಿಂದಾಗಿ ಜರ್ಝರಿತಗೊಂಡಿತು ಎಂದರು.
‘‘35 ನಾಗರಿಕರು ಮೃತಪಟ್ಟರು ಹಾಗೂ 13 ಮಂದಿ ಗಾಯಗೊಂಡರು. ಮೂಸಾ ಕಾಲಾ ಜಿಲ್ಲೆಯ ಖಾಸ್ಕರ್ ಪ್ರದೇಶದ ಗುರಿಯ ಸಮೀಪದ ಕಟ್ಟಡದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ಅವರಾಗಿದ್ದರು’’ ಎಂದು ಹೆಲ್ಮಂಡ್ ರಾಜ್ಯದ ಅಧಿಕಾರಿಯೊಬ್ಬರು ತಿಳಿಸಿದರು.
ದಾಳಿಯಲ್ಲಿ ಒಟ್ಟು 40 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಇನ್ನೋರ್ವ ಅಧಿಕಾರಿ ಹೇಳಿದ್ದಾರೆ.