ಎಲ್‍ಐಸಿ ಹುದ್ದೆ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡಲು ಒತ್ತಾಯಿಸಿ ಪ್ರತಿಭಟನೆ

ಮಂಡ್ಯ, ಸೆ.23: ಭಾರತೀಯ ಜೀವ ಮಿಮಾ ನಿಗಮ(ಎಲ್‍ಐಸಿ)ದ ಖಾಲಿ ಹುದ್ದೆಗಳ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಲು ಒತ್ತಾಯಿಸಿ ಮಂಡ್ಯ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸಂಜಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಅವರು, ಈಗ ಘೋಷಣೆಯಾಗಿರುವ ಎಲ್‍ಐಸಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬ್ಯಾಂಕಿಂಗ್, ರೈಲ್ವೆ ಮತ್ತಿತರ ಕೇಂದ್ರ ಸರಕಾದ ಇಲಾಖೆಗಳ ಪರೀಕ್ಷೆಗಳಿಗೆ ಕನ್ನಡ ಸೇರಿದಂತೆ ಯಾವುದೇ ಮಾತೃಭಾಷೆಯಲ್ಲಿ ಬರೆಯಲು ಅವಕಾಶ ನೀಡದೆ ಇಂಗ್ಲೀಷ್, ಹಿಂದಿ ಭಾಷೆಯಲ್ಲೇ ಪರೀಕ್ಷೆ ಬರೆಯಬೇಕಾಗಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ 8ನೇ ಅನುಚ್ಛೇದದಲ್ಲಿ ಉಲ್ಲೇಖಿಸಿರುವಂತೆ 22 ಭಾಷೆಗಳಲ್ಲಿ ಹಿಂದಿಯಂತೆಯೇ ಕನ್ನಡವೂ ಒಂದು ಭಾಷೆ. ಒಂದೇ ತೆರನಾದ ಸ್ಥಾನಮಾನಗಳನ್ನು ಅಧಿಕೃತವಾಗಿ ಮತ್ತು ಸಾಂವಿಧಾನಿಕವಾಗಿ ಹೊಂದಿರುವ ಕನ್ನಡದಲ್ಲಿ, ಅದೂ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೂ ಪರೀಕ್ಷೆ ಬರೆಯಲು ಅವಕಾಶವಿಲ್ಲವೆಂದರೆ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಮತ್ತು ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಡುವ ಸ್ವಾಯತ ಸಂಸ್ಥೆಗಳಿಗೆ ನಡೆಯುವ ಯಾವುದೇ ಪರೀಕ್ಷೆಗಳಿಗೂ ತಮ್ಮತಮ್ಮ ಮಾತೃಭಾಷೆಯಲ್ಲಿ ಬರೆಯುವ ಅವಕಾಶವಿರಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂಬಂಧ ರಾಜ್ಯದ ಎಲ್ಲ ಸಂಸದರು ಮತ್ತು ರಾಜ್ಯ ಸರಕಾರ ಭಾರತೀಯ ಜೀವ ವಿಮಾ ನಿಗಮ ಮತ್ತು ಕೇಂದ್ರ ಸರಕಾರದ ಜತೆ ಮಾತನಾಡಿ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ವಿದ್ಯಾರ್ಥಿಗಳಾದ ಮನೋರಂಜನ್, ರಕ್ಷಿತ, ಪೂಜಾಶ್ರಿ, ಹರೀಶ್‍ಜೈನ್, ಕಿರಣ್, ದೀಕ್ಷಿತ್ ಕುಮಾರ್, ಸಂಗೀತಾ, ಲೇಖನ, ಜನಪರ ಹೋರಾಟಗಾರ ಡಾ.ಎಚ್.ಎನ್.ರವೀಂದ್ರ, ಕಾಂಗ್ರೆಸ್ ಮುಖಂಡ ಸುಂಡಹಳ್ಳಿ ಮಂಜುನಾಥ್, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು, ಹಲಗೂರು ಸಿದ್ದಪ್ಪ, ಕರ್ನಾಟಕ ಹಿತರಕ್ಷಣಾ ವೇದಿಕೆಯ ಎಂ.ಬಿ.ನಾಗಣ್ಣಗೌಡ, ಸಂಪತ್‍ಕುಮಾರ್, ಸೋಮಶೇಖರ್, ಇತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







