ಬ್ರಿಟನ್ ತೈಲ ಟ್ಯಾಂಕರ್ ಬಿಡುಗಡೆ ಮಾಡಿದ ಇರಾನ್

ಟೆಹರಾನ್, ಸೆ. 23: ತನ್ನ ವಶದಲ್ಲಿರುವ, ಬ್ರಿಟಿಶ್ ಧ್ವಜ ಹೊಂದಿರುವ ತೈಲ ಟ್ಯಾಂಕರ್ ‘ಸ್ಟೆನಾ ಇಂಪೇರೊ’ ಹೊರಡಬಹುದಾಗಿದೆ ಎಂದು ಇರಾನ್ ಸೋಮವಾರ ಹೇಳಿದೆ. ಟ್ಯಾಂಕರ್ ಎರಡು ತಿಂಗಳ ಕಾಲ ಇರಾನ್‌ನ ವಶದಲ್ಲಿತ್ತು.
‘‘ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದೆ. ಅದರ ಆಧಾರದಲ್ಲಿ ತೈಲ ಟ್ಯಾಂಕರ್ ಈಗ ಹೊರಡಬಹುದಾಗಿದೆ’’ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಸರಕಾರಿ ವಕ್ತಾರ ಅಲಿ ರಬಿಐ ಹೇಳಿದರು.
ಜುಲೈ 19ರಂದು ಹೋರ್ಮುಝ್ ಜಲಸಂಧಿಯಲ್ಲಿ ಈ ತೈಲ ಟ್ಯಾಂಕರನ್ನು ಸುತ್ತುವರಿದ ಇರಾನ್‌ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್, ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಮೀನುಗಾರಿಕಾ ದೋಣಿಯೊಂದಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪದಲ್ಲಿ ತೈಲ ಟ್ಯಾಂಕರನ್ನು ಇರಾನ್ ವಶಪಡಿಸಿಕೊಂಡಿತ್ತು. ಇರಾನ್‌ನ ಬಂದರ್ ಅಬ್ಬಾಸ್‌ನಲ್ಲಿರುವ ಬಂದರಿನಲ್ಲಿ ಹಡಗನ್ನು ಇಡಲಾಗಿತ್ತು.
ಇರಾನ್‌ನ ತೈಲ ಟ್ಯಾಂಕರೊಂದನ್ನು ಬ್ರಿಟನ್ ಆಡಳಿತಕ್ಕೆ ಒಳಪಟ್ಟ ಜಿಬ್ರಾಲ್ಟರ್ ವಶಪಡಿಸಿಕೊಂಡಿರುವುದಕ್ಕೆ ಪ್ರತಿಯಾಗಿ ಇರಾನ್ ಬ್ರಿಟನ್‌ನ ತೈಲ ಟ್ಯಾಂಕರನ್ನು ವಶಪಡಿಸಿಕೊಂಡಿತ್ತು ಎಂದು ಹೇಳಲಾಗಿತ್ತು. ಬಳಿಕ, ಇರಾನ್‌ನ ತೈಲ ಟ್ಯಾಂಕರನ್ನು ಆಗಸ್ಟ್ 15ರಂದು ಜಿಬ್ರಾಲ್ಟರ್‌ನಿಂದ ಬಿಡಲಾಗಿತ್ತು.







