ಬಾಲಕಿಯ ಸಾಮೂಹಿಕ ಅತ್ಯಾಚಾರ: ಆರೋಪಿಯನ್ನು ಥಳಿಸಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು
ಇಬ್ಬರು ಆರೋಪಿಗಳು ಪರಾರಿ
ಲಕ್ನೋ, ಸೆ.24: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಗ್ರಾಮವೊಂದರಲ್ಲಿ 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮೂವರು ದುಷ್ಕರ್ಮಿಗಳು ಘಟನೆಯ ವೀಡಿಯೋ ಮಾಡಿ ಅದನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಆರೋಪಿಗಳ ಪೈಕಿ ಒಬ್ಬನನ್ನು ಗ್ರಾಮಸ್ಥರು ಭತ್ತದ ಗದ್ದೆಯಿಲ್ಲಿ ಪತ್ತೆ ಹಚ್ಚಿ ಆತನಿಗೆ ಥಳಿಸಿದ್ದಾರೆ. ಈ ಘಟನೆಯ ವೀಡಿಯೋ ಕೂಡ ಹರಿದಾಡುತ್ತಿದ್ದು , ಹರಿದ ಶರ್ಟ್ ಧರಿಸಿರುವ ಯುವಕನೊಬ್ಬನಿಗೆ ಗ್ರಾಮಸ್ಥರು ಹೊಡೆಯುತ್ತಿರುವುದು ಕಾಣಿಸುತ್ತದೆ. ಆರೋಪಿ ನಾಝಿಂ(20) ಎಂಬಾತನನ್ನು ಬಂಧಿಸಲಾಗಿದ್ದರೆ, ಉಳಿದಿಬ್ಬರಾದ ಮುಹಮ್ಮದ್ ಚೊಟ್ಕಾ ಹಾಗೂ ಬಡ್ಕಾ ಪರಾರಿಯಾಗಿದ್ದಾರೆ. ಅವರಿಬ್ಬರೂ ಸೋದರರಾಗಿದ್ದಾರೆ.
ಗ್ರಾಮದಲ್ಲಿ ಪಶುಗಳಿಗೆ ಆಹಾರ ಸಂಗ್ರಹಿಸುತ್ತಿದ್ದಾಗ ಮೂವರು ತನ್ನ ಮೇಲೆ ದಾಳಿ ನಡೆಸಿ ತನ್ನ ಬಾಯಿಗೆ ಬಟ್ಟೆ ತುರುಕಿ ನಿರ್ಜನ ಸ್ಥಳದಲ್ಲಿ ಅತ್ಯಾಚಾರಗೈದಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾಳೆ. ಆಕೆ ಹಾಗೂ ಆಕೆಯ ಕಟುಂಬ ಠಾಣೆಗೆ ರವಿವಾರ ದೂರು ನೀಡಲು ಹೋದಾಗ ಅವರ ಜತೆ ದುರ್ವರ್ತನೆ ತೋರಿದ ಇಬ್ಬರು ಪೊಲೀಸರನ್ನು ವಜಾಗೊಳಿಸಲಾಗಿದೆ.
ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.