ವುಮೆನ್ ಇಂಡಿಯಾ ಮೂವ್‌ಮೆಂಟ್ ರಾಜ್ಯ ಸಮಿತಿಯ ಸಭೆ
ನವೆಂಬರ್ 1-30ರವರೆಗೆ ವಿಮ್ ಸದಸ್ಯತ್ವ ಅಭಿಯಾನ
ಮಂಗಳೂರು, ಸೆ.24: ವುಮೆನ್ ಇಂಡಿಯಾ ಮೂವ್‌ಮೆಂಟ್ ಕರ್ನಾಟಕ ರಾಜ್ಯ ಸಮಿತಿಯ ಸಭೆಯು ಇತ್ತೀಚೆಗೆ ನಗರದ ಕಚೇರಿಯಲ್ಲಿ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂರವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಪ್ರಸಕ್ತ ರಾಜಕೀಯ ವಿದ್ಯಮಾನ ಹಾಗೂ ದೇಶದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ ನವೆಂಬರ್ 1ರಿಂದ 30ರವರೆಗೆ ವಿಮ್ ಸದಸ್ಯತ್ವ ಅಭಿಯಾನ ನಡೆಸಲು ತೀರ್ಮಾನಿಸಿದೆ.
ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ರಾಜ್ಯ-ಕೆಂದ್ರ ಸರಕಾರಗಳೆರಡೂ ತೋರುತ್ತಿರುವ ನಿರ್ಲಕ್ಷ್ಯ ಖಂಡನಾರ್ಹ. ಜನರ ಬವಣೆಗಳಿಗೆ ಸ್ಪಂದಿಸದ ಸರಕಾರಗಳಿಗೆ ಧಿಕ್ಕಾರವಿದೆ. ಭಾವನಾತ್ಮಕ ವಿಷಯಗಳು ಹಾಗೂ ಪೊಳ್ಳು ಘೋಷಣೆಗಳಿಂದ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲಾಗದು ಎಂಬ ಎಚ್ಚರಿಕೆ ಸರಕಾರಗಳಿಗಿರಬೇಕು. ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸದೆ ಉಡಾಫೆಯ ಹೇಳಿಕೆಗಳನ್ನು ನೀಡುತ್ತಿರುವ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಕಡೆ ಗಮನ ಹರಿಸಬೇಕು ಮತ್ತು ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಸಭೆ ಆಗ್ರಹಿಸಿದೆ.
ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸದೆ ವಿದ್ಯಾರ್ಥಿಗಳನ್ನು ಸತಾಯಿಸುತ್ತಿರುವ ಸರಕಾರದ ಪಕ್ಷಪಾತಿ ನೀತಿಯನ್ನು ಸಭೆ ಖಂಡಿಸಿದೆ. ಕಳೆದೊಂದು ವರ್ಷದಿಂದ ವಿದ್ಯಾರ್ಥಿಗಳು ತಮ್ಮ ಶುಲ್ಕ ಪಾವತಿಸಲಾಗದೆ ಪರದಾಡುತ್ತಿದ್ದರೂ ಸರಕಾರ ವೌನವಹಿಸಿವೆ. ವಿದ್ಯಾಭ್ಯಾಸದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ತಡೆಯುವ ಹುನ್ನಾರ ಇದಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನುದಾನ ಕಡಿತ ಮಾಡಲಾಗಿತ್ತು. ಇದೀಗ ಬಿಜೆಪಿ ಸರಕಾರವೂ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಇದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ. ಯಾವ ಸರಕಾರವೂ ಜನ ಸ್ನೇಹಿಯಾಗಿಲ್ಲ ಎಂಬುವುದನ್ನು ಇದು ಸಾಬೀತು ಪಡಿಸಿದೆ. ತಕ್ಷಣ ಸರಕಾರ ಮಧ್ಯ ಪ್ರವೇಶಿಸಿ ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸಿ ವಿದ್ಯಾಭ್ಯಾಸಕ್ಕೆ ಅವಕಾಶ ದೊರಕಿಸಿ ಕೊಡಬೇಕಾಗಿದೆ ಎಂದು ಸಭೆ ಒತ್ತಾಯಿಸಿದೆ.
ದ.ಕ. ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್, ಮೋದಿಯ ಆಪ್ತ ಕಾರ್ಯದರ್ಶಿ ಚೆನ್ನೈ ಹೈಕೋರ್ಟ್‌ನ ನ್ಯಾಯಾಧೀಶರ ಸಹಿತ ಹಲವು ಹಿರಿಯ ಅಧಿಕಾರಿಗಳ ಸರಣಿ ರಾಜೀನಾಮೆಯು ಎಚ್ಚರಿಕೆಯ ಕರೆಗಂಟೆಯಾಗಿದೆ. ದೇಶದ ಜನತೆ ಸಹಬಾಳ್ವೆ, ಸೌಹಾರ್ದತೆ, ಶಾಂತಿಯಿಂದ ಬಾಳಲು ಇಲ್ಲಿನ ಸರಕಾರಗಳು ಅನುವು ಮಾಡಿಕೊಡಬೇಕಾಗಿದೆ. ಸಂವಿಧಾನಬದ್ಧವಾಗಿ ಅಧಿಕಾರಕ್ಕೇರಿದ ರಾಜಕಾರಣಿಗಳು ಬಳಿಕ ಅಧಿಕಾರವನ್ನು ದುರುಪಯೋಗಪಡಿಸುತ್ತಿದ್ದಾರೆ. ಸರಕಾರ ತಕ್ಷಣ ಸರ್ವರಿಗೂ ಸಮಾನ ಸ್ವಾತಂತ್ರ್ಯ, ನ್ಯಾಯ, ಸಮಾನತೆಗಳನ್ನು ಖಚಿತಪಡಿಸಬೇಕು ಎಂದು ಸಭೆಯು ಒತ್ತಾಯಿಸಿದೆ.
ದೇಶದಲ್ಲಿ ಮಹಿಳೆಯರು ವಿಶ್ವದಲ್ಲೇ ಅತ್ಯಂತ ಅಭದ್ರ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಅಂಕಿ ಅಂಶಗಳು ಹೇಳುತ್ತದೆ. ಇಲ್ಲಿನ ರಾಜಕಾರಣಿಗಳು ತಮ್ಮ ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯರಿಗೆ ಅತ್ಯಾಚಾರ, ಲೈಂಗಿಕ ಕಿರುಕುಳನ್ನು ನೀಡುತ್ತಿರುವುದು ವರದಿಯಾಗುತ್ತಿವೆ. ರಾಜಕಾರಣಿಗಳ ಪ್ರಭಾವದಿಂದ ಅತ್ಯಾಚಾರದಂತಹ ಪ್ರಕರಣಗಳಲ್ಲೂ ದುರ್ಬಲ ಕೇಸು ಹಾಕಿ ವ್ಯವಸ್ಥೆ ಕೈತೊಳೆದುಕೊಳ್ಳುತ್ತಿರುವುದು ಖೇದಕರ. ಸರಕಾರ ತಕ್ಷಣ ಎಚ್ಚೆತ್ತುಕೊಂಡು ಮಹಿಳೆಯರಿಗೆ ಸುರಕ್ಷತೆಯನ್ನು ಖಾತ್ರಿಪಡಿಸಬೇಕೆಂದು ಸಭೆಯು ಒತ್ತಾಯಿಸಿದೆ.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ, ರಾಜ್ಯ ಕಾರ್ಯದರ್ಶಿ ಆಯೆಷಾ ಸಿದ್ದೀಕ್, ಶಾಝಿಯಾ ಫೈರೋಝ್, ದ.ಕ. ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.







