ಅಮಿತಾಬ್ ಬಚ್ಚನ್ ಗೆ ‘ದಾದಾ ಸಾಹೇಬ್ ಫಾಲ್ಕೆ’ ಪುರಸ್ಕಾರ

ಮುಂಬೈ,ಸೆ.24: ಹಿರಿಯ ನಟ ಅಮಿತಾಬ್ ಬಚ್ಚನ್‌ಗೆ ಭಾರತದ ಸಿನೆಮಾರಂಗದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ‘ದಾದಾ ಸಾಹೇಬ್ ಫಾಲ್ಕೆ’ ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೆಕರ್ ಟ್ವೀಟ್ ಮಾಡಿದ್ದಾರೆ. “ಎರಡು ತಲೆಮಾರುಗಳನ್ನು ಮನರಂಜಿಸಿರುವ ಮತ್ತು ಸ್ಫೂರ್ತಿ ತುಂಬಿರುವ ಭಾರತೀಯ ಸಿನೆಮಾ ರಂಗದ ದಂತಕತೆ ಅಮಿತಾಬ್ ಬಚ್ಚನ್ ಅವರನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇಡೀ ದೇಶ ಮತ್ತು ಅಂತರ್‌ರಾಷ್ಟ್ರೀಯ ಸಮುದಾಯ ಖುಷಿಗೊಂಡಿದೆ. ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು” ಎಂದು ಜಾವಡೆಕರ್ ಟ್ವೀಟ್ ಮಾಡಿದ್ದಾರೆ.
ವಿಮರ್ಶಾತ್ಮಕ ಮತ್ತು ವಾಣಿಜ್ಯವಾಗಿ ಯಶಸ್ವಿ ಸಿನೆಮಾಗಳನ್ನು ನೀಡಿರುವ ಬಚ್ಚನ್ ದೇಶದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಝಂಜೀರ್, ದಿವಾರ್, ಶೋಲೆ ಮುಂತಾದ ಸಿನೆಮಾಗಳ ಮೂಲಕ ಅವರು ಹಿಂದಿ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಇಳಿವಯಸ್ಸಿನಲ್ಲೂ ಪಿಂಕ್, ಪಾ ಮತ್ತು ಪೀಕು ಮುಂತಾದ ಸಿನೆಮಾಗಳಲ್ಲಿ ಮನೋಜ್ಞ ಅಭಿನಯ ನೀಡುವ ಮೂಲಕ ಅವರು ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದರು. ಬಝ್ ಲುರ್ಮನ್‌ರ ದಿ ಗ್ರೇಟ್ ಗಟ್ಸ್‌ಬಿ ಸಿನೆಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಬಚ್ಚನ್ ಹಾಲಿವುಡ್‌ಗೂ ಪ್ರವೇಶ ಪಡೆದರು. ಕಲಾ ಕ್ಷೇತ್ರಕ್ಕೆ ನೀಡಿದ ಕಾಣಿಕೆಗಾಗಿ ಅಮಿತಾಬ್ ಬಚ್ಚನ್ ಅವರನ್ನು ಭಾರತದ ಸರಕಾರ 1984ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಮತ್ತು 2015ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಿದೆ. ಫ್ರಾನ್ಸ್ ಸರಕಾರ 2007ರಲ್ಲಿ ಅವರಿಗೆ ಅತ್ಯುನ್ನತ ನಾಗರಿಕ ಗೌರವ ನೈಟ್ ಆಫ್ ದ ಲೀಜನ್ ಆಫ್ ಆನರ್‌ನಿಂದ ಸನ್ಮಾನಿಸಿದೆ.







