ವಿಶ್ವದ ಅತ್ಯಂತ ಹಳೆಯ ಚಹಾ ಸಂಶೋಧನಾ ಸಂಸ್ಥೆ ಟಿಟಿಆರ್ಐಗೆ ಹಣಕಾಸಿನ ಮುಗ್ಗಟ್ಟು

ಜೋರ್ಹಾಟ್(ಅಸ್ಸಾಂ),ಸೆ.24: ಇಲ್ಲಿಯ ಟೋಕ್ಲಾಯಿ ಚಹಾ ಸಂಶೋಧನಾ ಸಂಸ್ಥೆ (ಟಿಟಿಆರ್ಐ)ಗೆ ತೀವ್ರ ಹಣಕಾಸಿನ ಬಿಕ್ಕಟ್ಟು ಎದುರಾಗಿದ್ದು,ಇದು ವಿಶ್ವದ ಅತ್ಯಂತ ಹಳೆಯ ಮತ್ತು ಬೃಹತ್ ಚಹಾ ಸಂಬಂಧಿತ ಸಂಸ್ಥೆಯ ಕಾರ್ಯ ನಿರ್ವಹಣೆಗೆ ತೊಡಕನ್ನುಂಟು ಮಾಡಿದೆ. ಆದರೆ ಈ ಕಠಿಣ ಪರಿಸ್ಥಿತಿಯಿಂದ ಪಾರಾಗಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ವರ್ಷಗಳಿಂದಲೂ ತಮ್ಮ ವಿಮಾ ಕಂತು ಮತ್ತು ಭವಿಷ್ಯ ನಿಧಿ ವಂತಿಗೆಗಳನ್ನು ಪಾವತಿಸಲಾಗಿಲ್ಲ ಎಂದು ಉದ್ಯೋಗಿಗಳು ಆರೋಪಿಸಿದ್ದಾರೆ. ಭರವಸೆ ನೀಡಿದ್ದ ಹಣದ ಬಿಡುಗಡೆ,ವಿಜ್ಞಾನಿಗಳ ನೇಮಕ,ಸುಗಮ ಸಂಶೋಧನಾ ಕಾರ್ಯ ನಿರ್ವಹಣೆ ಮತ್ತು ಇತರ ಕ್ರಮಗಳಿಗಾಗಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಅವರು ಮುಷ್ಕರ ನಡೆಸುತ್ತಿದ್ದಾರೆ. ನಿವೃತ್ತರಾಗಿರುವ ನೌಕರರಿಗೂ ಸಂಪೂರ್ಣ ಬಾಕಿಯನ್ನು ಪಾವತಿಸಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
2012-17ರ ಅವಧಿಯಲ್ಲಿ ಸಂಸ್ಥೆಗೆ ಹಣಕಾಸು ಮುಗ್ಗಟ್ಟು ಆರಂಭಗೊಂಡಿದ್ದು,ನಿವೃತ್ತ ನೌಕರರ ವೇತನ ಬಾಕಿಯನ್ನು ಪಾವತಿಸಲೂ ಸಾಧ್ಯವಾಗುತ್ತಿಲ್ಲ ಎಂದು ಸಂಸ್ಥೆಯ ನಿರ್ದೇಶಕ ಎ.ಕೆ.ಬರುವಾ ಸುದ್ದಿಸಂಸ್ಥೆಗೆ ತಿಳಿಸಿದರು.
ಕೆಲವು ಬಾಹ್ಯ ಹಣಕಾಸು ನೆರವಿನ ಯೋಜನೆಗಳು ನಡೆಯುತ್ತಿವೆೆ,ಆದರೆ ಮುಖ್ಯವಾದ ಸಂಶೋಧನಾ ಕಾರ್ಯಕ್ಕೆ ತೊಡಕುಂಟಾಗಿದೆ ಎಂದರು.
1911ರಲ್ಲಿ ಟೋಕ್ಲಾಯಿ ಪ್ರಯೋಗ ಕೇಂದ್ರದ ಸ್ಥಾಪನೆಯೊಂದಿಗೆ ಭಾರತದಲ್ಲಿ ಚಹಾ ಕುರಿತು ಸಂಘಟಿತ ಸಂಶೋಧನೆ ಆರಂಭಗೊಂಡಿತ್ತು. 2014ರಲ್ಲಿ ಅದಕ್ಕೆ ಟಿಟಿಆರ್ಐ ಎಂದು ಮರುನಾಮಕರಣ ಮಾಡಲಾಗಿತ್ತು.
ಚಹಾ ಉದ್ಯಮವು ಸದ್ಯ ಟಿಟಿಆರ್ ಐನ ವಾರ್ಷಿಕ ಬಜೆಟ್ನ ಶೇ.64ರಷ್ಟು ಆರ್ಥಿಕ ನೆರವನ್ನು ಒದಗಿಸುತ್ತಿದೆ. 10 ಶಾಖೆಗಳನ್ನು ಹೊಂದಿರುವ ಅದು ಅಸ್ಸಾಂ, ಪ.ಬಂಗಾಳ,ತ್ರಿಪುರಾ,ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಲ್ಲಿ ಸಂಶೋಧನೆ ಮತ್ತು ಸಲಹಾ ಸೇವೆಗಳನ್ನು ನಿರ್ವಹಿಸುತ್ತಿದೆ.
ಕೇಂದ್ರ ಸರಕಾರವು ಟಿಟಿಆರ್ಐಗೆ ಹಣಕಾಸು ನೆರವು ಒದಗಿಸುತ್ತಿದ್ದು,ಅದರ ಬಳಕೆಯ ಉಸ್ತುವಾರಿಗಾಗಿ ಚಹಾ ಮಂಡಳಿಯನ್ನು ನಿಯೋಜಿಸಿದೆ.