ನೊಬೆಲ್ ಪ್ರಶಸ್ತಿಗೆ ನಾನು ಅರ್ಹ, ಆದರೆ ಅವರು ಕೊಡುವುದಿಲ್ಲ: ಡೊನಾಲ್ಡ್ ಟ್ರಂಪ್

ವಿಶ್ವಸಂಸ್ಥೆ, ಸೆ. 24: “ನನಗೆ ಇನ್ನೂ ನೊಬೆಲ್ ಪ್ರಶಸ್ತಿ ಸಿಕ್ಕಿಲ್ಲ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ದೂರಿಕೊಂಡಿದ್ದಾರೆ.
‘‘ಅವರು ನೊಬೆಲ್ ಪ್ರಶಸ್ತಿಯ ವಿತರಣೆಯನ್ನು ನ್ಯಾಯೋಚಿತವಾಗಿ ಮಾಡುವುದಾದರೆ, ಹಲವು ವಿಷಯಗಳಲ್ಲಿ ನನಗೆ ಈ ಪ್ರಶಸ್ತಿ ಸಿಗಬೇಕು. ಆದರೆ, ಅವರು ಹಾಗೆ ಮಾಡುವುದಿಲ್ಲ’’ ಎಂದು ಟ್ರಂಪ್ ಹೇಳಿದರು.
ಹಿಂದಿನ ಅಧ್ಯಕ್ಷ ಬರಾಕ್ ಒಬಾಮಗೆ 2009ರಲ್ಲಿ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಆಶ್ಚರ್ಯವೆಂಬಂತೆ ನೀಡಲಾಗಿತ್ತು ಎಂದು ಅವರು ಹೇಳಿಕೊಂಡರು.
‘ಅಂತರ್‌ರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ಜನರ ನಡುವಿನ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾಡಿದ ಅಸಾಧಾರಣ ಪ್ರಯತ್ನಗಳಿಗಾಗಿ’ ಒಬಾಮಗೆ ಶಾಂತಿ ಪ್ರಶಸ್ತಿಯನ್ನು ನೀಡಲಾಗಿತ್ತು.
‘‘ಅಧ್ಯಕ್ಷ ಹುದ್ದೆಗೆ ಏರಿದ ಕೂಡಲೇ ಒಬಾಮಗೆ ಅವರು ನೊಬೆಲ್ ಪ್ರಶಸ್ತಿ ನೀಡಿದರು. ತನಗೆ ಯಾಕೆ ಪ್ರಶಸ್ತಿ ನೀಡಿದರು ಎನ್ನುವುದೇ ಅವರಿಗೆ ಗೊತ್ತಿಲ್ಲ. ನಿಮಗೊಂದು ವಿಷಯ ಗೊತ್ತಾ? ಈ ವಿಷಯದಲ್ಲಿ ಮಾತ್ರ ಅವರೊಂದಿಗೆ ನನ್ನ ಸಹಮತವಿದೆ’’ ಎಂದು ಟ್ರಂಪ್ ಹೇಳಿದರು.
ವಿಶ್ವಸಂಸ್ಥೆಯ ಮಹಾಸಭೆಯ ವಾರ್ಷಿಕ ಅಧಿವೇಶನದ ನೇಪಥ್ಯದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ನಡೆಸಿದ ದ್ವಿಪಕ್ಷೀಯ ಮಾತುಕತೆಯ ವೇಳೆ ಅಮೆರಿಕ ಅಧ್ಯಕ್ಷರು ಈ ಮಾತುಗಳನ್ನು ಆಡಿದರು.







