ಉತ್ತರಪ್ರದೇಶ: ಸಚಿವರ ಆದಾಯ ತೆರಿಗೆ ವಿನಾಯತಿ ಕಾನೂನಿಗೆ ತಿದ್ದುಪಡಿ

ಲಕ್ನೊ, ಸೆ. 24: ಆದಾಯ ತೆರಿಗೆ ಸಲ್ಲಿಸುವುದರಿಂದ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರಿಗೆ ವಿನಾಯತಿ ನೀಡುವ ಕಾನೂನಿಗೆ ತಿದ್ದುಪಡಿ ತರಲು ಉತ್ತರಪ್ರದೇಶ ಸಂಪುಟ ಮಂಗಳವಾರ ನಿರ್ಧರಿಸಿದೆ.
‘‘ಇನ್ನು ಮುಂದೆ ಸಚಿವರು ಆದಾಯ ತೆರಿಗೆ ಸಲ್ಲಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಪುಟ ನಿರ್ಧರಿಸಿದೆ. ಅಲ್ಲದೆ, ಉತ್ತರಪ್ರದೇಶ ಸಚಿವರ ವೇತನಗಳು, ಭತ್ಯೆ ಹಾಗೂ ಇತರ ಕಾಯ್ದೆ 1981ಕ್ಕೆ ತಿದ್ದುಪಡಿ ತರಲು ಶಿಫಾರಸು ಮಾಡಿದೆ’’ ಎಂದು ಉತ್ತರಪ್ರದೇಶದ ವಕ್ತಾರ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ.
‘‘ಈ ಸಭೆ ಅಧಿವೇಶನ ಅಲ್ಲ. ಇದನ್ನು (ತಿದ್ದುಪಡಿ ಮಸೂದೆ) ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು’’ ಎಂದು ರಾಜ್ಯ ಇಂಧನ ಸಚಿವರು ಕೂಡ ಆಗಿರುವ ಶರ್ಮಾ ತಿಳಿಸಿದ್ದಾರೆ.
ತಮ್ಮ ಯಾವುದೇ ಆದಾಯ ತೆರಿಗೆ ಪಾವತಿಸದಂತೆ ರಾಜ್ಯ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಖಾತರಿ ನೀಡುವ 1981ರಲ್ಲಿ ಅಸ್ತಿತ್ವಕ್ಕೆ ತರಲಾದ ಕಾನೂನಿನ ಬಗ್ಗೆ ಮಾಧ್ಯಮದಲ್ಲಿ ಟೀಕೆ ವ್ಯಕ್ತವಾದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ತರಪ್ರದೇಶದಲ್ಲಿ ಸಚಿವರು ಆದಾಯ ತೆರಿಗೆ ಪಾವತಿಸುವ ಬದಲು ‘‘ಉತ್ತರಪ್ರದೇಶ ಸಚಿವರ ವೇತನ, ಭತ್ಯೆ ಹಾಗೂ ಇತರ ಕಾಯ್ದೆ-1981’ರ ಅಡಿಯಲ್ಲಿ ಸರಕಾರವೇ ಅವರ ತೆರಿಗೆ ಪಾಲನ್ನು ಪಾವತಿಸುತ್ತದೆ.







