ಸಂವಹನ ನಿರ್ಬಂಧ ರದ್ದತಿಗೆ ಕಾಶ್ಮೀರ ಪ್ರೆಸ್ ಕ್ಲಬ್ ಆಗ್ರಹ

ಶ್ರೀನಗರ,ಸೆ.24: ಕಾಶ್ಮೀರ ಕಣಿವೆಯಲ್ಲಿ ಸಂವಹನಗಳ ಮೇಲೆ ಹೇರಿರುವ ನಿರ್ಬಂಧವನ್ನು ಖಂಡಿಸಿರುವ ಕಾಶ್ಮೀರ ಪ್ರೆಸ್ ಕ್ಲಬ್ (ಕೆಪಿಸಿ) ಸೇವೆಗಳ ಪುನರಾರಂಭಕ್ಕೆ ಆಗ್ರಹಿಸಿದೆ. ತನ್ಮಧ್ಯೆ ಜಮ್ಮು-ಕಾಶ್ಮೀರದಲ್ಲಿಯ ನಿರ್ಬಂಧಗಳು ಮಂಗಳವಾರ 51ನೇ ದಿನಕ್ಕೆ ಕಾಲಿರಿಸಿವೆ.
ಸಂವಹನ ನಿರ್ಬಂಧವನ್ನು ತಕ್ಷಣವೇ ಹಿಂದೆಗೆದುಕೊಳ್ಳುವಂತೆ ಸರಕಾರಕ್ಕೆ ತನ್ನ ಆಗ್ರಹವನ್ನು ಹೇಳಿಕೆಯೊಂದರಲ್ಲಿ ಪುನರುಚ್ಚರಿಸಿರುವ ಕೆಪಿಸಿ,ಇದರಿಂದ ಕಣಿವೆಯಲ್ಲಿ ಮಾಧ್ಯಮಗಳು ಸುಗಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.
ಕಾಶ್ಮೀರದಲ್ಲಿ ಸುದೀರ್ಘ ಮತ್ತು ಅಭೂತಪೂರ್ವ ನಿರ್ಬಂಧಗಳ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿರುವ ಕೆಪಿಸಿ, ಇದು ಪತ್ರಕರ್ತರು ಮತ್ತು ಮಾಧ್ಯಮಗಳ ಕಾರ್ಯಗಳಿಗೆ ತೀವ್ರ ತೊಡಕನ್ನುಂಟು ಮಾಡಿದೆ. ನಿರ್ಬಂಧಗಳು ಸಂಪೂರ್ಣ ಅನಗತ್ಯ ಮತ್ತು ಅಸಮಂಜಸವಾಗಿವೆ ಹಾಗೂ ಕಾಶ್ಮೀರಿ ಮಾಧ್ಯಮಗಳ ಧ್ವನಿಯನ್ನಡಗಿಸುವ ಉದ್ದೇಶ ಹೊಂದಿವೆ ಎಂದು ಹೇಳಿದೆ.
Next Story





