ದುಬೈ ವಿಮಾನ ನಿಲ್ದಾಣದಲ್ಲಿ ಮಾವಿನ ಹಣ್ಣು ಕದ್ದ ಭಾರತೀಯ ಉದ್ಯೋಗಿ ಗಡಿಪಾರು

ದುಬೈ, ಸೆ. 24: ಕಳೆದ ವರ್ಷ ಪ್ರಯಾಣಿಕನೊಬ್ಬನ ಬ್ಯಾಗ್‌ನಿಂದ ಎರಡು ಮಾವಿನಹಣ್ಣುಗಳನ್ನು ಕದ್ದ ದುಬೈ ವಿಮಾನ ನಿಲ್ದಾಣದ ಭಾರತೀಯ ಉದ್ಯೋಗಿಯೊಬ್ಬನನ್ನು ಗಡಿಪಾರು ಮಾಡುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ನ್ಯಾಯಾಲಯವೊಂದು ಆದೇಶ ನೀಡಿದೆ.
2017 ಆಗಸ್ಟ್ 11ರಂದು 27 ವರ್ಷದ ಭಾರತೀಯ ಉದ್ಯೋಗಿಯು ಸುಮಾರು 6 ದಿರ್ಹಮ್ ಬೆಲೆಯ ಎರಡು ಮಾವಿನ ಹಣ್ಣುಗಳನ್ನು ಕದ್ದಿದ್ದನು ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.
5,000 ದಿರ್ಹಮ್ (ಸುಮಾರು 96,600 ರೂಪಾಯಿ) ದಂಡವನ್ನು ವಸೂಲಿ ಮಾಡಿದ ಬಳಿಕ, ಅಪರಾಧಿಯನ್ನು ಗಡಿಪಾರು ಮಾಡುವಂತೆ ಫಸ್ಟ್ ಇನ್ಸ್‌ಟೇನ್ಸ್ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ.
ಅವನ ಕೆಲಸ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಚೀಲಗಳನ್ನು ಕನ್ವೇಯರ್ ಬೆಲ್ಟ್‌ನಲ್ಲಿ ಇಡುವುದಾಗಿತ್ತು. ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಭಾರತಕ್ಕೆ ಸಾಗಬೇಕಿದ್ದ ಹಣ್ಣಿನ ಬುಟ್ಟಿಯೊಂದರಿಂದ ಮಾವಿನ ಹಣ್ಣುಗಳನ್ನು ಕದ್ದಿರುವುದನ್ನು ಅವನು ಒಪ್ಪಿಕೊಂಡಿದ್ದನು. ತನಗೆ ಆಗ ಬಾಯಾರಿಕೆಯಾಗಿತ್ತು ಹಾಗೂ ನೀರಿಗಾಗಿ ಹುಡುಕುತ್ತಿದ್ದೆ ಎಂದು ಆತ ಹೇಳಿದ್ದನು.





