ಮೂಡುಬಿದಿರೆಯಲ್ಲಿ ಪೋಷಣಾ ಅಭಿಯಾನ ಮಾಸಾಚರಣೆ ಹಾಗೂ ಜಾಗೃತಿ ಜಾಥಾ ಮತ್ತು ಮಾಹಿತಿ

ಮೂಡುಬಿದಿರೆ: ನಮ್ಮ ಸುತ್ತಮುತ್ತಲಿನಲ್ಲಿ ಸಿಗುವ ಹಣ್ಣು ಹಂಪಲುಗಳು ಮತ್ತು ಸೊಪ್ಪು ತರಕಾರಿಗಳಲ್ಲಿ ವಿಫುಲವಾದ ಪೌಷ್ಟಿಕಾಂಶ ತುಂಬಿರುತ್ತವೆ. ಅವುಗಳಲ್ಲಿ ಔಷಧೀಯ ಗುಣಗಳಿದ್ದರೂ ಪೇಟೆಯಲ್ಲಿ ಸಿಗುವ ಆಹಾರ ವಸ್ತುಗಳ ಬಗ್ಗೆ ನಾವು ಆಕರ್ಷಿತರಾಗುತ್ತಿದ್ದೇವೆ. ಇದನ್ನು ಕಡಿಮೆ ಮಾಡಬೇಕು. ಮಕ್ಕಳು, ಮಹಿಳೆಯರು ಮತ್ತು ಹಿರಿಯರು ಸೇವಿಸುವುದರಿಂದ ಸ್ವಾಸ್ಥ ಆರೋಗ್ಯವಂತ ಜನರು ಮತ್ತು ಸಮಾಜ ರೂಪುಗೊಳ್ಳಲು ಸಾಧ್ಯವಿದೆ ಆದ್ದರಿಂದ ಆಳ್ವಾಸ್ ಆಯುರ್ವೇದ ಕಾಲೇಜಿನ ಉಪನ್ಯಾಸಕಿ ಡಾ. ಸ್ಮಿತಾ ಭಟ್ ಹೇಳಿದರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ವರ್ಣ ಮಂದಿರದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪೋಷಣಾ ಅಭಿಯಾನ ಮಾಸಾಚರಣೆ ಹಾಗೂ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಗರ್ಭಿಣಿ ನವಜಾತ ಶಿಶುವಿಗೆ ಆರು ತಿಂಗಳವರೆಗೆ ತಾಯಿ ಎದೆ ಹಾಲು ಅತಿ ಮುಖ್ಯ. ಆದರೆ ಕೆಲವು ಬಾಣಂತಿಯರು ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೊಳಗಾಗಿ ಸ್ತನ್ಯದ ಕೊರತೆ ಉಂಟಾಗಿ ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರುತ್ತಿದೆ. ಗರ್ಭಿಣಿಯರ ಮೇಲೆ ಒತ್ತಡ ಇರಬಾರದು ಹಾಗೂ ನಿತ್ಯ ಪೌಷ್ಟಿಕ ಆಹಾರ ಸೇವನೆಯಿಂದ ಆಕೆಯ ಸ್ತನ್ಯ ವರ್ಧನೆಗೆ ಸಹಕಾರಿಯಾಗುವುದೆಂದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗುಣಮಟ್ಟದ ಶಿಕ್ಷಣ ಮತ್ತು ಒಳ್ಳೆಯ ಆರೋಗ್ಯವನ್ನು ಕಾಯ್ದುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದವರು ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಪ್ರಯೋಜನ ನೀಡಲಿವೆ ಎಂದರು. ಪುರಸಭೆ ಅಧಿಕಾರಿ ಇಂದು ಅಧ್ಯಕ್ಷತೆ ವಹಿಸಿದರು.
ಗರ್ಭಿಣಿಯರಿಗೆ ಗೌರವ: ಇದೇ ಸಂದರ್ಭದಲ್ಲಿ ಹಲವು ಗರ್ಭಿಣಿಯರನ್ನು ವೇದಿಕೆಗೆ ಕರೆಸಿ ಅವರಿಗೆ ಪಲಪುಷ್ಪ ನೀಡಿ, ಆರತಿ ಬೆಳಗಿ ಗೌರವಿಸಲಾಯಿತು. ಎಲ್ಲಾ ಗರ್ಭಿಣಿಯರು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಲಿ ಎಂದು ಅತಿಥಿಗಳು ಹಾರೈಸಿದರು
ಪುರಸಭಾ ಸದಸ್ಯರುಗಳಾದ ನಾಗರಾಜ್ ಪೂಜಾರಿ, ಸುರೇಶ್ ಕೋಟ್ಯಾನ್,ರಾಜೇಶ್ ನಾಯ್ಕ್, ಕೊರಗಪ್ಪ, ಜೊಸ್ಸಿ ಮಿನೇಜಸ್ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕು.ಶ್ಯಾಮಲ ಸಿ.ಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಶೀಲಾವತಿ, ಜಿಲ್ಲಾ ನಿರೂಪಣಾಧಿಕಾರಿ ಉಸ್ಮಾನ್, ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ, ಉದ್ಯಮಿ ಶ್ರೀಪತಿ ಭಟ್, ಪೊಲೀಸ್ ಇನ್‍ಸ್ಪೆಕ್ಟರ್ ಬಿ.ಎಸ್.ದಿನೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಲ್ಲಮುಂಡ್ಕೂರು ವಲಯದ ಮೇಲ್ವಿಚಾರಕಿ ಭಾರತಿ ಸ್ವಾಗತಿಸಿದರು. ಮೂಡುಬಿದಿರೆ ಮೇಲ್ವೀಚಾರಕಿ ಕಾತ್ಯಾಯಿನಿ ಕಾರ್ಯಕ್ರಮ ನಿರೂಪಿಸಿದರು. ಬೆಳುವಾಯಿ ಮೇಲ್ವೀಚಾರಕಿ ಶುಭ ವಂದಿಸಿದರು.







