ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸಲು ಪ್ಲಾಗ್ ರನ್

ಬೆಂಗಳೂರು, ಸೆ. 24: ರಾಜಧಾನಿಯ ನಾಗರಿಕರಲ್ಲಿ ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸಲು ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ನಗರದ 50 ಕಡೆ ಪ್ಲಾಗ್ ರನ್ ಆಯೋಜಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.
ಮಂಗಳವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ, ಯುನೈಟೆಡ್ ವೇ ಇಂಡಿಯಾ ಮತ್ತು ಗೋ ನೇಟಿವ್ ಸಹಯೋಗದೊಂದಿಗೆ ಅಕ್ಟೋಬರ್ 2ರಂದು ಎಂ.ಜಿ.ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ಲಾಗ್ ರನ್‌ಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷವು ನಗರದಲ್ಲಿ ಪ್ಲಾಗ್ ರನ್ ಅನ್ನು ಆಯೋಜಿಸಲಾಗಿದ್ದು, 7,000 ಜನರು ಭಾಗವಹಿಸಿ 33.4 ಟನ್ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿದ್ದರು. ಇದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿತ್ತು. ಈ ಬಾರಿಯೂ ಪ್ಲಾಗ್ ರನ್ ಅನ್ನು ನಡೆಸಲಾಗುತ್ತಿದ್ದು, ಇಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ನ್ನು ನಾಡಪ್ರಭು ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸಲಾಗುವುದು. ಅಲ್ಲದೇ ಮರು ಬಳಕೆಗೆ ಬಾರದ ಕಸವನ್ನು ಸಿಮೆಂಟ್ ಕಾರ್ಖಾನೆಗೆ ಕಳುಹಿಸಲಾಗುವುದು. 2014ರಿಂದ ಈವರೆಗೆ 32,000 ಕೆ.ಜಿ. ಪ್ಲಾಸ್ಟಿಕ್‌ನ್ನು ವಶಪಡಿಸಿಕೊಳ್ಳಲಾಗಿದೆ. 3.5 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಸಂಚಾಲಕ ರಾಮಕೃಷ್ಣ ಗಣೇಶ್ ಮಾತನಾಡಿ, ನಗರದ 50 ಕಡೆ ಪ್ಲಾಗ್ ರನ್ ಅನ್ನು ಆಯೋಜಿಸಲಾಗಿದೆ. ಸ್ಯಾಂಕಿ, ಹಲಸೂರು ಕೆರೆ, ಸೇರಿದಂತೆ ನಿಗದಿತ 50 ಸ್ಥಳಗಳಿಂದ ಪ್ಲಾಗ್ ರನ್ ಸುಮಾರು 3 ಕಿ.ಮೀ ವರೆಗೆ ನಡೆಯಲಿದ್ದು, ಅಲ್ಲಿನ ರಸ್ತೆಗಳಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದರು.
ಪ್ಲಾಗ್ ರನ್‌ನಲ್ಲಿ ಭಾಗವಹಿಸುವವರಿಗೆ ಗ್ಲೌಸ್, ಮಾಸ್ಕ್, ಮತ್ತು ಏಪ್ರನ್ ಅನ್ನು ಉಚಿತವಾಗಿ ನೀಡಲಾಗುವುದು. ಆಸಕ್ತರು www.indiaploogrun ವೆಬ್‌ಸೈಟ್ ಮೂಲಕ ನೋಂದಾಯಿಸಬಹುದು.
ಪ್ಲಾಗ್ ರನ್‌ನಲ್ಲಿ ಸಂಗ್ರಹಿಸುವ ಕಸವನ್ನು ಒಟ್ಟುಗೂಡಿಸಿ ಎಷ್ಟು ಪ್ಲಾಸ್ಟಿಕ್ ಸಂಗ್ರಹವಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದು. ಅಲ್ಲದೆ, ಇಂದಿನಿಂದ ಅಕ್ಟೋಬರ್ 2ರವರೆಗೆ ಮನೆ ಮನೆಗಳಲ್ಲಿ ಎಲ್ಲಾ ಬಗೆಯ ಪ್ಲಾಸ್ಟಿಕ್ ಅನ್ನು ಸಂಗ್ರಹಿಸುವಂತೆ ಪೌರ ಕಾರ್ಮಿಕರಿಗೆ ಸೂಚನೆ ನೀಡಲಾಗಿದೆ.
-ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ ಘನತ್ಯಾಜ್ಯ