ಅರುಣಾಚಲಪ್ರದೇಶದ ಮೊದಲ ಮಹಿಳಾ ಲೆಫ್ಟಿನೆಂಟ್ ಕರ್ನಲ್ ಪೊನುಂಗ್ ಡೊಮಿಂಗ್

ಹೊಸದಿಲ್ಲಿ, ಸೆ. 24: ಸೇನಾಧಿಕಾರಿ ಮೇಜರ್ ಪೊನುಂಗ್ ಡೊಮಿಂಗ್ ಅರುಣಾಚಲಪ್ರದೇಶದ ಮೊದಲ ಮಹಿಳಾ ಲೆಫ್ಟಿನೆಂಟ್ ಕರ್ನಲ್ ಆಗಿ ಭಡ್ತಿ ಹೊಂದಿದ್ದಾರೆ.
ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಪಸಿಘಾಟ್ ನಿವಾಸಿ ಪೊನುಂಗ್ ಡೊಮಿಂಗ್ 2008ರಲ್ಲಿ ಭಾರತೀಯ ಸೇನೆಗೆ ನಿಯೋಜನೆಯಾಗಿದ್ದರು. ಅವರು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಪೊನುಂಗ್ ಡೊಮಿಂಗ್ ಅವರನ್ನು ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಸೋಮವಾರ ಟ್ವಿಟ್ಟರ್ ಮೂಲಕ ಅಭಿನಂದಿಸಿದ್ದಾರೆ.
‘‘ನಮಗೆಲ್ಲ ಹೆಮ್ಮೆಯ ಕ್ಷಣ. ಮೇಜರ್ ಪೊನುಂಗ್ ಡೊಮಿಂಗ್ ಚರಿತ್ರೆ ಸೃಷ್ಟಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಸ್ಥಾನಕ್ಕೆ ಭಡ್ತಿ ಹೊಂದಿದ ಅರುಣಾಚಲ ಪ್ರದೇಶದ ಮೊದಲ ಮಹಿಳಾ ಸೇನಾಧಿಕಾರಿಯಾಗಿ ಪೊನುಂಗ್ ಡೊಮಿಂಗ್ ಹೊರ ಹೊಮ್ಮಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆ’’ ಎಂದು ಖಂಡು ಟ್ವೀಟ್ ಮಾಡಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಪೊನುಂಗ್ ಡೊಮಿಂಗ್ ಚೆನ್ನೈ ಅಧಿಕಾರಿಗಳ ತರಬೇತು ಅಕಾಡೆಮಿಯ ಹಳೇ ವಿದ್ಯಾರ್ಥಿನಿ 2008ರಲ್ಲಿ ಲೆಫ್ಟಿನೆಂಟ್ ಆಗಿ ಸೇರಿದ ಬಳಿಕ ನಾಲ್ಕೂವರೆ ವರ್ಷಗಳಲ್ಲಿ ಪೊನುಂಗ್ ಡೊಮಿಂಗ್‌ಗೆ ಮೇಜರ್ ಸ್ಥಾನ ನೀಡಲಾಗಿತ್ತು. ಕಾಂಗೊದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನೆ ಕಾರ್ಯಕ್ರಮದಲ್ಲಿ ಕೂಡ ಲೆಫ್ಟಿನೆಂಟ್ ಕರ್ನಲ್ ಪೊನುಂಗ್ ಡೊಮಿಂಗ್ ಕಾರ್ಯ ನಿರ್ವಹಿಸಿದ್ದರು.







