ಬೆಂವಿವಿ ಕುಲಪತಿ ನೇಮಕಾತಿ ರದ್ದು: ಹೈಕೋಟ್ ಆದೇಶ

ಬೆಂಗಳೂರು, ಸೆ.24: ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಕೆ.ಆರ್.ವೇಣುಗೋಪಾಲ್ ನೇಮಕಾತಿಯನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಈ ಕುರಿತು ಧಾರವಾಡದ ಡಾ.ಸಂಗಮೇಶ್ ಪಾಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ಕುಲಪತಿ ಕೆ.ಆರ್.ವೇಣುಗೋಪಾಲ್ ವಿರುದ್ಧ ಹಲವು ಅಕ್ರಮಗಳ ಆರೋಪ ಮಾಡಲಾಗಿದೆ. ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ ಕೂಡ ಮಾಡಲಾಗಿದೆ. ಅರ್ಹತೆ ಇಲ್ಲದಿದ್ದರೂ ಪ್ರೊಫೆಸರ್ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಯುವಿಸಿಇ ಪ್ರಿನ್ಸಿಪಾಲ್ ಆಗಿದ್ದಾಗಲೂ ಅಕ್ರಮ ಎಸಗಿದ ಆರೋಪ ಮಾಡಲಾಗಿದೆ. ರೀಡರ್ ಹುದ್ದೆಗೆ ಇವರ ನೇಮಕವನ್ನು ರದ್ದುಪಡಿಸಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಉಪ ಲೋಕಾಯುಕ್ತರು ಕೂಡ ಇವರ ವಿರುದ್ಧ ವರದಿ ನೀಡಿದ್ದರು. ಆದರೂ ಕುಲಪತಿ ಹುದ್ದೆಗೆ ನೇಮಕಾತಿ ಮಾಡಲಾಗಿತ್ತು. ರಾಜ್ಯ ಸರಕಾರದ ಒಪ್ಪಿಗೆ ಇಲ್ಲದೆ ನೇಮಕವಾಗಿತ್ತು ಎಂದು ಅರ್ಜಿದಾರ ಡಾ.ಸಂಗಮೇಶ ಅರ್ಜಿ ಸಲ್ಲಿಸಿದ್ದರು. ನ್ಯಾಯಪೀಠವು ವಕೀಲರ ವಾದ ಆಲಿಸಿ ಕುಲಪತಿ ನೇಮಕವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.





