ಹೊಟೇಲ್ ಕಟ್ಟಡದ ಟೆರೇಸ್ ಏರಿ ಆತ್ಮಹತ್ಯೆ ಮಾಡುತ್ತೇನೆಂದ ಟಿಕ್ ಟಾಕ್ ಸ್ಟಾರ್

ಹೊಸದಿಲ್ಲಿ, ಸೆ. 24: ಐದು ದಶಲಕ್ಷಕ್ಕೂ ಅಧಿಕ ಬೆಂಬಲಿಗರನ್ನು ಹೊಂದಿರುವ ಜನಪ್ರಿಯ ಟಿಕ್ ಟಾಕ್ ಸ್ಟಾರ್ ತನ್ನ ಪತ್ನಿಯೊಂದಿಗೆ ಜಗಳ ಮಾಡಿದ ಬಳಿಕ 10 ಮಹಡಿಯ ಹೊಟೇಲ್ ಕಟ್ಟಡದ ಮೇಲೇರಿ ಕೆಳಗೆ ಜಿಗಿಯುವ ಬೆದರಿಕೆ ಒಡ್ಡಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ.
17 ಗಂಟೆಗಳ ಕಾಲ ಮನವೊಲಿಸಿದ ಬಳಿಕ ಆತನನ್ನು ಕೆಳಗೆ ಕರೆದುಕೊಂಡು ಬರಲಾಯಿತು. ರಾತ್ರಿಯಿಡೀ ನಡೆದ ಈ ಪ್ರಹಸನದ ದೃಶ್ಯಗಳನ್ನು ಆತ ಸೆರೆ ಹಿಡಿದು ಟಿಕ್ ಟಾಕ್‌ನಲ್ಲಿ ಹಂಚಿಕೆ ಮಾಡಿ ಮತ್ತಷ್ಟು ಹೊಸ ಬೆಂಬಲಿಗರನ್ನು ಪಡೆದುಕೊಂಡಿದ್ದಾನೆ. ಅರ್ಮನ್ ಮಲಿಕ್ ಎಂದು ಟಿಕ್‌ಟಾಕ್‌ನಲ್ಲಿ ಜನಪ್ರಿಯರಾಗಿರುವ ಸಂದೀಪ್ ತನ್ನ ಪತ್ನಿಯೊಂದಿಗೆ ಜಗಳ ನಡೆದ ಬಳಿಕ ದಿಲ್ಲಿಯ ಹರಿ ನಗರದಲ್ಲಿರುವ ಹೊಟೇಲ್ ಕಟ್ಟಡದ 10ನೇ ಮಹಡಿ ಏರಿದ್ದ. ಅನಂತರ ಟೆರೇಸ್‌ಗೆ ಹೋಗಿ ಕಟ್ಟಡದಿಂದ ಕೆಳಗೆ ಜಿಗಿಯುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ಮನೆ ಕೆಲಸದವಳನ್ನು ಅತ್ಯಾಚಾರ ಮಾಡಿರುವುದಾಗಿ ಪತ್ನಿ ಹಾಗೂ ಅತ್ತೆ ಆರೋಪಿಸಿದ್ದಾರೆ. ತನ್ನ ವಿರುದ್ಧ ಆರೋಪ ಪಟ್ಟಿ ದಾಖಲಿಸಿದ್ದಾರೆ ಎಂದು 31ರ ಹರೆಯದ ಸಂದೀಪ್ ಹೇಳಿದ್ದಾನೆ. ಪ್ರಕರಣ ಹಿಂದೆ ತೆಗೆಯದೇ ಇದ್ದರೆ ತಾನು ಕೆಳಗೆ ಬರಲಾರೆ ಎಂದು ಸಂದೀಪ್ ಬೆದರಿಕೆ ಒಡ್ಡಿದ್ದಾನೆ. ಈ ಬಿಕ್ಕಟ್ಟಿನ ನಡುವೆ ಸಂದೀಪ್ ಆಹಾರ, ಹಣ್ಣುಗಳು ಹಾಗೂ ಸ್ಥಳಕ್ಕೆ ಮಾಧ್ಯಮಗಳು ಆಗಮಿಸುವಂತೆ ಬೇಡಿಕೆ ಒಡ್ಡಿದ್ದಾನೆ. ಆತ್ಮಹತ್ಯೆಯ ಬೆದರಿಕೆ ಒಡ್ಡುವ ಮೂರು ವೀಡಿಯೊಗಳನ್ನು ಆತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಅಲ್ಲದೆ, ಇನ್ನೊಂದು ವೀಡಿಯೊ ಹಾಗೂ ಸುಸೈಡ್ ನೋಟ್ ಅನ್ನು ಕೂಡ ಹಂಚಿಕೊಂಡಿದ್ದಾನೆ.
ಕೆಳಗೆ ಬಂದ ಬಳಿಕ ಆತ ಈ ವೀಡಿಯೊಗಳನ್ನು ಅಳಿಸಿದ್ದಾನೆ. ಅನಂತರ ಕಳೆದ ವರ್ಷ ಅಪ್ರಾಪ್ತೆಯೊಬ್ಬಳು ದಾಖಲಿಸಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಪೊಲೀಸರು ಬಂಧಿಸಿದರು.







