ಭಾರತದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಕೋಚ್ ಕಿಮ್ ಜೀ ರಾಜೀನಾಮೆ
ಸಿಂಧುಗೆ ಹಿನ್ನಡೆ

ಹೈದರಾಬಾದ್, ಸೆ.24: ವೈಯಕ್ತಿಕ ಕಾರಣ ನೀಡಿ ಭಾರತದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಕೋಚ್ ಕಿಮ್ ಜೀ ಹ್ಯೂನ್ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕೊರಿಯಾದ ಕೋಚ್ ಕಿಮ್ ಜೀ ಕಳೆದ ನಾಲ್ಕು ತಿಂಗಳುಗಳಿಂದ ಪಿ.ವಿ. ಸಿಂಧು ಜೊತೆ ಕೆಲಸ ಮಾಡುತ್ತಿದ್ದಾರೆ. ವಿಶ್ವದ ನಂ.5ನೇ ಆಟಗಾರ್ತಿ ಸಿಂಧು ವಿಶ್ವ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು. ಕೆಲವು ವಾರಗಳ ಹಿಂದೆ ಕಿಮ್ ಜೀ ಪತಿಗೆ ಪಾರ್ಶ್ವವಾಯು ಬಾಧಿಸಿರುವ ಕಾರಣ ನ್ಯೂಝಿಲ್ಯಾಂಡ್‌ಗೆ ತೆರಳಿದ್ದಾರೆ. ಕಿಮ್ ಜೀ ಪತಿ ಚೇತರಿಸಿಕೊಳ್ಳಲು ಕನಿಷ್ಠ ಆರು ತಿಂಗಳ ಅಗತ್ಯವಿರುವ ಹಿನ್ನೆಲೆಯಲ್ಲಿ ಕಿಮ್ ಜೀ ನ್ಯೂಝಿಲ್ಯಾಂಡ್‌ನಲ್ಲೇ ಇರಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನಾನು ಭಾರತಕ್ಕೆ ವಾಪಸ್ ಬರುವ ಬಗ್ಗೆ 100 ಶೇ. ಖಾತ್ರಿಯಿಲ್ಲ ಎಂದು ಕಳೆದ ವಾರ ಕಿಮ್ ಹೇಳಿಕೆ ನೀಡಿದ್ದರು. ಸೋಮವಾರದ ಬೆಳವಣಿಗೆಯ ಬಳಿಕ ಕಿಮ್ ಜೀ ವಾಪಸ್ ಬರುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಕಿಮ್ ಕೊರಿಯಾದ ಮಾಜಿ ಅಂತರ್‌ರಾಷ್ಟ್ರೀಯ ಆಟಗಾರ್ತಿ ಹಾಗೂ ಕೋಚ್ ಆಗಿದ್ದರು. ಏಶ್ಯನ್ ಗೇಮ್ಸ್‌ನಲ್ಲಿ ಕೊರಿಯಾ ತಂಡ ಕಳಪೆ ಪ್ರದರ್ಶನ ನೀಡಿದ ಬಳಿಕ ಕೋಚ್ ಹುದ್ದೆ ತ್ಯಜಿಸಿದ್ದರು. ಪುಲ್ಲೇಲ ಗೋಪಿಚಂದ್‌ರೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದ ಕಿಮ್ ಜೀ ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಐತಿಹಾಸಿಕ ಸಾಧನೆ ಮಾಡಲು ನೆರವಾಗಿದ್ದರು. ತನ್ನ ಗೇಮ್ ಸುಧಾರಿಸಲು ಕಿಮ್ ನೆರವು ಮುಖ್ಯವಾಗಿತ್ತು ಎಂದು ಸಿಂಧು ಪ್ರಶಂಸಿಸಿದ್ದರು. ‘‘ನಾನು ಕಿಮ್ ಜೀ ಜೊತೆ ಕಳೆದ ಕೆಲವು ತಿಂಗಳುಗಳಿಂದ ತರಬೇತಿ ನಡೆಸುತ್ತಿರುವೆ. ಅವರು ನನ್ನ ಆಟದ ಲ್ಲಿ ಕೆಲವು ಬದಲಾವಣೆಗೆ ಶಿಫಾರಸು ಮಾಡಿದ್ದರು. ಗೋಪಿ ಸರ್ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡಿದ್ದೆವು. ಎಲ್ಲವೂ ನಾವು ಅಂದುಕೊಂಡಂತೆ ನಡೆದಿದ್ದೆವು. ನನ್ನ ಕೌಶಲ್ಯದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ನನಗೆ ಇನ್ನಷ್ಟು ಸುಧಾರಣೆಯಾಗಬೇಕಾಗಿದೆ’’ ಎಂದು ಸಿಂಧು ಹೇಳಿದರು.
ಕಿಮ್ ರಾಜೀನಾಮೆಯಿಂದಾಗಿ ಗೋಪಿಚಂದ್ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಕಿಮ್ ಇತರ ಕೊರಿಯಾ ಹಾಗೂ ಇಂಡೋನೇಶ್ಯ ಕೋಚ್‌ಗಳ ಜೊತೆ ಕೋಚಿಂಗ್ ಬಳಗಕ್ಕೆ ಸೇರ್ಪಡೆಯಾದ ಬಳಿಕ ಗೋಪಿಚಂದ್ ಪ್ರಮುಖ ಅಂಶಗಳತ್ತ ಗಮನ ನೀಡಲು ಸಮಯ ಲಭಿಸಿತ್ತು.







