ಆರ್ಥಿಕ ಸ್ಥಿತಿ ಹದಗೆಟ್ಟ ಸಂದರ್ಭ ಪ್ರಧಾನಿಯಿಂದ ಅಮೆರಿಕಾದಲ್ಲಿ ಚುನಾವಣಾ ಪ್ರಚಾರ: ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್
"ಮೋದಿ, ಅಮಿತ್ ಶಾ ಕಂಡರೆ ಬಿಜಪಿ ಮುಖಂಡರಿಗೆ ಹೆದರಿಕೆ"

ಚಿಕ್ಕಮಗಳೂರು, ಸೆ.24: ಕೇಂದ್ರ ಸರಕಾರದ ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಿತ್ತು. ಆದರೆ ಅವರು ಜನರ ತೆರಿಗೆಯ ಹಣ ಹಾಗೂ ಅಮೂಲ್ಯ ಸಮಯವನ್ನು ಅಮೆರಿಕಾ ಅಧ್ಯಕ್ಷರ ಚುನಾವಣಾ ಪ್ರಚಾರಕ್ಕಾಗಿ ವ್ಯರ್ಥ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಆರ್ಥಿಕ ನೀತಿಗಳು ಅಂಬಾನಿ, ಅದಾನಿ, ಜಯ್ ಶಾರಂತಹ ಬಂಡವಾಳಶಾಯಿಗಳ ಪರವಾಗಿವೆ. ನೋಟುಗಳ ನಿಷೇದ, ಜಿಎಸ್‍ಟಿಯಂತಹ ಆರ್ಥಿಕ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವಂತೆ ಮಾಡಿವೆ. ಕೈಗಾರಿಕೆಗಳು, ಉದ್ಯಮಗಳು ಅಧಃಪತನ ಕಾಣುತ್ತಿವೆ. ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿಯಾದವರು ಆರ್ಥಿಕತೆಯ ಪುನಶ್ಚೇತನಕ್ಕಾಗಿ ಜನಪರ ಯೋಜನೆಗಳನ್ನು ಜಾರಿ ಮಾಡಬೇಕು. ಆರ್ಥಿಕ ತಜ್ಞರುಗಳೊಂದಿಗೆ ಸಮಾಲೋಚಿಸಬೇಕು. ಆದರೆ ಪ್ರಧಾನಿ ಮೋದಿ ಕೇವಲ ಪ್ರಚಾರಕ್ಕಾಗಿ ಜನಸಾಮಾನ್ಯರ ತೆರಿಗೆ ಹಣದಲ್ಲಿ ಅಮೆರಿಕಾ ಪ್ರವಾಸ ಮಾಡಿ, ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಚುನಾವಣಾ ಪ್ರಚಾರ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಟೀಕಿಸಿದ ಅವರು, ಕೇಂದ್ರ ಸರಕಾರ ಆರ್ಥಿಕ ಹಿಂಜರಿತಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇನ್ನಾದರೂ ಚಿಂತಿಸಬೇಕಿದೆ ಎಂದು ಅವರು ಇದೇ ವೇಳೆ ಸಲಹೆ ನೀಡಿದರು.
ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆಯಾಗಿದೆ:
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದ ಸಂದೀಪ್, ಈಡಿ, ಸಿಬಿಐ, ಸಿಬಿಐನಂತಹ ಸಂವಿಧಾನಿಕ ಸ್ವಾಯತ್ತಾ ಸಂಸ್ಥೆಗಳನ್ನು ಕೈಗೊಂಬೆಯನ್ನಾಗಿಸಿಕೊಂಡಿರುವ ಕೇಂದ್ರದ ಬಿಜೆಪಿ ಸರಕಾರ ಇದೀಗ ಚುನಾವಣಾ ಆಯೋಗವನ್ನೂ ತನ್ನ ಕೈಗೊಂಬೆಯನ್ನಾಗಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಉರುಳಿಸಿದ್ದ 15 ಅನರ್ಹ ಶಾಸಕರಿಗೆ ಆಸೆ, ಆಮಿಷಗಳನ್ನೊಡ್ಡಿದ್ದ ಬಿಜೆಪಿ ಮುಖಂಡರು ಇದೀಗೆ ಅನರ್ಹ ಶಾಸಕರ ಬೆನ್ನಿಗೆ ನಿಂತಿದ್ದಾರೆ. ಪ್ರಸಕ್ತ ಉಪಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಅನರ್ಹ ಶಾಸಕರನ್ನು ಚುನಾವಣಾ ಕಣಕ್ಕಿಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ದಿಲ್ಲಿಗೆ ದೌಡಾಯಿಸಿ ಅಮಿತ್ ಶಾ ಬಳಿ ಅನರ್ಹ ಶಾಸಕರ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಮಿತ್ ಶಾ ಈ ಶಾಸಕರಿಗೆ ಅಭಯ ನೀಡಿರುವ ಬೆನ್ನಲ್ಲೇ ದೇಶದ ಚುನಾವಣಾ ಆಯೋಗದ ವಕೀಲರು ನ್ಯಾಯಾಲದ ಮೊರೆ ಹೋಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿಲ್ಲ ಎಂದು ವಾದ ಮುಂದಿಟ್ಟಿದ್ದಾರೆ. ಈ ಮೂಲಕ ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆಯಾಗಿರುವುದು ರುಜುವಾತಾಗಿದ್ದು, ಅನರ್ಹ ಶಾಸಕರ ಪರ ವಕಾಲತ್ತು ವಹಿಸಿರುವ ಚುನಾವಣಾ ಆಯೋಗದ ಈ ನಡೆ ಪ್ರಜಾಪ್ರಭುತ್ವದಲ್ಲಿ ಅಪಯಕಾರಿ ಬೆಳವಣಿಗೆಯಾಗಿದೆ ಎಂದು ಟೀಕಿಸಿದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಲಕ್ಷಾಂತರ ಜನರ ಬದುಕು ಅತಂತ್ರಗೊಂಡಿದೆ. ಜಿಲ್ಲೆಯಲ್ಲಿ ನೆರೆ ಹಾವಳಿ ಹಾಗೂ ಅತಿವೃಷ್ಟಿಯಿಂದ ಸುಮಾರು 600 ಕೋ. ರೂ. ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ತಾನೊಬ್ಬ ಜವಬ್ದಾರಿಯುತ ಸಚಿವ ಎಂಬಂತೆ ಮಾತನಾಡುವ ಸಚಿವರು ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲೂ ಜವಬ್ದಾರಿತನ ಮೆರೆಯಬೇಕು. ರಾಜ್ಯ ಸರಕಾರ ಅತಿವೃಷ್ಟಿ ಪರಿಹಾರಕ್ಕೆ 25 ಕೋ. ರೂ. ಬಿಡುಗಡೆ ಮಾಡಿದೆ ಎಂದು ಸಚಿವ ಸಿಟಿ ರವಿ ಹೇಳಿಕೆ ನೀಡಿದ್ದಾರೆ. ಆದರೆ ಜಿಲ್ಲೆಯಲ್ಲಿ 600 ಕೋ. ರೂ. ಅತಿವೃಷ್ಟಿ ಹಾನಿ ಸಂಭವಿಸಿದ್ದು, 25 ಕೋ. ರೂ. ಪರಿಹಾರಧನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಬಿ.ಎಂ.ಸಂದೀಪ್ ದೂರಿದರು.
ಸಚಿವ ಸಿ.ಟಿ.ರವಿ ಅವರು ಜವಬ್ದಾರಿಯುತ ಸಚಿವನಾಗಿರುವುದು ನಿಜವಾಗಿದ್ದರೆ ಅವರು ರಾಜ್ಯ ಹಾಗೂ ಕೇಂದ್ರ ಸರಕಾರದ ಬಳಿ ಅತಿವೃಷ್ಟಿ ಹಾನಿಗೆ 600 ಕೋ. ರೂ. ಪರಿಹಾರ ತರಲು ಪ್ರಯತ್ನ ನಡೆಸಬೇಕು. ಸಚಿವರು ಹಾಗೂ ಬಿಜೆಪಿ ಮುಖಂಡರಿಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಬಳಿ ಮಾತನಾಡಲು ಹೆದರಿಕೆ ಇದ್ದಲ್ಲಿ ಅವರು ರಾಜ್ಯದಿಂದ ಕೇಂದ್ರದ ಬಳಿಗೆ ಸರ್ವಪಕ್ಷದ ಮುಖಂಡರ ನಿಯೋಗವನ್ನು ಕರೆದೊಯ್ದು ಅತಿವೃಷ್ಟಿ ಹಾನಿಗೆ ಪರಿಹಾರಧನ ತರುವ ನಿಟ್ಟಿನಲ್ಲಾದರೂ ಮುಂದಾಗಬೇಕೆಂದು ಇದೇ ವೇಳೆ ಸಂದೀಪ್ ವ್ಯಂಗ್ಯವಾಡಿದರು.
ಸಿ.ಟಿ.ರವಿ ಅವರು ಕಳೆದ 15 ವರ್ಷಗಳಿಂದ ಚಿಕ್ಕಮಗಳೂರು ಕ್ಷೇತ್ರದ ಶಾಸಕರಾಗಿದ್ದು, ಹಿಂದೊಮ್ಮೆ ಸಚಿವರಾಗಿ ಈಗಲೂ ಸಚಿವರಾಗಿದ್ದಾರೆ. ಅವರು ಕಳೆದ 15 ವರ್ಷಗಳಿಂದ ಕರಗಡ ಹಾಗೂ ಮೆಡಿಕಲ್ ಕಾಲೇಜುಗಳ ವಿಚಾರವನ್ನು ಕೇವಲ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಯೋಜನೆಗಳ ಜಾರಿಗೆ ಮುಂದಾಗುತ್ತಿಲ್ಲ. ಸಚಿವ ರವಿಗೆ ಕ್ಷೇತ್ರದ ಜನರು ಹಾಗೂ ರೈತರ ಮೇಲೆ ನಿಜವಾಗಿಯೂ ಕಾಳಜಿ ಇದ್ದರೇ ಈ ಯೋಜನೆಗಳನ್ನು ಕೂಡಲೇ ಜಾರಿ ಮಾಡಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅತೀಕ್ ಖೈಸರ್, ಶಿವಾನಂದಸ್ವಾಮಿ, ಮಂಜೇಗೌಡ, ಯುವಕಾಂಗ್ರೆಸ್ ಮುಖಂಡ ಶಿವಕುಮಾರ್ ಉಪಸ್ಥಿತರಿದ್ದರು.
ಚಿಕ್ಕಗಳೂರು ನಗರದಲ್ಲಿ 6 ವರ್ಷಗಳ ಹಿಂದೆ 80 ಕೋ. ರೂ. ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಆರಂಭಿಸಿದ್ದು, ಈ ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ. ಕಾಮಗಾರಿಗಾಗಿ ನಗರಸ ರಸ್ತೆಗಳನ್ನೆಲ್ಲ ಅಗೆದು ಹಾಳುಗೆಡವಲಾಗಿದ್ದು, ರಸ್ತೆಗಳನ್ನು ದುರಸ್ತಿಯೂ ಮಾಡಿಲ್ಲ. ಯುಜಿಡಿ ಕಾಮಗಾರಿಗೆ ಬಿಡುಗಡೆಯಾದ ಹಣ ಎಲ್ಲಿಗೆ ಹೋಗಿದೆಯೋ ಗೊತ್ತಿಲ್ಲ. ಈ ಕಾಮಗಾರಿಯೇ ಪೂರ್ಣಗೊಳ್ಳದ ಹೊತ್ತಿನಲ್ಲಿ ಅಮೃತ್ ಯೋಜನೆಯಡಿ ಮತ್ತೆ 200 ಕೋ. ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಂಡು 6 ತಿಂಗಳೊಳಗೆ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಈ ಅನುದಾನದಲ್ಲೂ ಕಾಮಗಾರಿಗಳು ನಡೆಯುವುದು ಅನುಮಾನ. ಈ ಕಾಮಗಾರಿಗಳಿಗೆ ಬಿಡುಗಡೆಯಾಗುವ ಭಷ್ರರ ಪಾಲಾಗಲಿದೆ.
- ಬಿ.ಎಂ.ಸಂದೀಪ್, ಎಐಸಿಸಿ ಕಾರ್ಯದರ್ಶಿ
ಅತಿವೃಷ್ಟಿ ಸಂತ್ರಸ್ಥರ ನೆರವಿಗೆ ರಾಜ್ಯ ಕೇಂದ್ರ ಸರಕಾರಗಳು ಪರಿಹಾರಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಜಿಲ್ಲೆ ಹಾಗೂ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಮಾಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ಧನ ಬಿಡುಗಡೆ ಮಾಡದ ರಾಜ್ಯ, ಕೇಂದ್ರ ಸರಕಾರಗಳನ್ನು ಟೀಕಿಸಿದ್ದಾರೆ. ಇದಕ್ಕೆ ಸಚಿವ ಸಿ.ಟಿ.ರವಿ ಕಾಂಗ್ರೆಸ್ ಮುಖಂಡರು ಸಂತ್ರಸ್ತರ ಗ್ರಾಮಗಳನ್ನು ದತ್ತು ಪಡೆಯಲಿ ಎಂದು ವ್ಯಂಗ್ಯವಾಡಿದ್ದಾರೆ. ಆದರೆ ಸಚಿವರು ಸಂತ್ರಸ್ತರ ನೆರವಿಗಾಗಿ ಮಾಡಿರುವುದಾದರೂ ಏನು? ಸಚಿವರು ಹಾಗೂ ಬಿಜೆಪಿ ಮುಖಂಡರು ಎಷ್ಟು ಗ್ರಾಮಗಳನ್ನು ದತ್ತು ಪಡೆದಿದ್ದಾರೆಂಬುದನ್ನು ಸ್ಪಷ್ಟಪಡಿಸಬೇಕು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಸಿಟಿ ರವಿ ವ್ಯಂಗ್ಯ, ಆರೋಪಗಳನ್ನು ಮಾಡುವುದನ್ನು ಬಿಟ್ಟು ಜಿಲ್ಲೆಗೆ ಅಗತ್ಯವಗಿರುವ 600 ಕೋ. ರೂ. ಪರಿಹಾರವನ್ನು ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಇದೇ ವೇಳೆ ಸಂದೀಪ್ ಕುಟುಕಿದರು.







