ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಜಯಿಸಿದ ಭಾರತದ ಸಾಧನೆಗೆ 12 ವರ್ಷ

ಜೋಹಾನ್ಸ್‌ಬರ್ಗ್, ಸೆ.24: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಯುವ ಟೀಮ್ ಇಂಡಿಯಾ ಚೊಚ್ಚಲ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಟ್ರೋಫಿಯನ್ನು ಎತ್ತಿದ ಐತಿಹಾಸಿಕ ಸಾಧನೆಗೆ 12 ವರ್ಷಗಳು ಸಂದಿವೆ.
2007 ಸೆಪ್ಟೆಂಬರ್ 24 ರಂದು ಜೋಹಾನ್ಸ್ ಬರ್ಗ್‌ನಲ್ಲಿ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ರೋಚಕವಾಗಿ ಮಣಿಸಿದ್ದ ಭಾರತ ಮೊದಲ ಆವೃತ್ತಿಯ ಐಸಿಸಿ ವಿಶ್ವ ಟ್ವೆಂಟಿ- 20 ಟ್ರೋಫಿಯನ್ನು ಎತ್ತಿತ್ತು.
ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗುಲಿ ಮತ್ತು ಅನಿಲ್ ಕುಂಬ್ಳೆ ಅವರಂತಹ ವಿಶ್ವ ಶ್ರೇಷ್ಠ ಆಟಗಾರರ ಅನುಪಸ್ಥಿತಿಯಲ್ಲಿ ಯುವ ತಂಡವನ್ನು ನಾಯಕನಾಗಿ ಮುನ್ನಡೆಸುವ ಜವಾಬ್ದಾರಿಯನ್ನು ಧೋನಿಗೆ ವಹಿಸಿಕೊಡಲಾಗಿತ್ತು. ಆದರೆ ಧೋನಿ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಹೊಸ ಇತಿಹಾಸ ಬರೆದಿದ್ದರು.
ಭಾರತ ಘಟಾನುಘಟಿ ಆಟಗಾರರ ಅನುಪಸ್ಥಿತಿಯಲ್ಲಿ ಟೂರ್ನಿಯ ಆರಂಭದಲ್ಲಿ ದುರ್ಬಲ ತಂಡವಾಗಿ ಕಾಣಿಸಿಕೊಂಡಿತ್ತು. ಆದರೆ ಉತ್ತಮ ಪ್ರದರ್ಶನ ನೀಡಿದ ಭಾರತ ಫೈನಲ್ ಹಾದಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಅಂದಿನ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯವನ್ನು ಸೋಲಿಸಿತ್ತು.
ಫೈನಲ್‌ನಲ್ಲಿ ನಾಯಕ ಧೋನಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿತ್ತು. ಗೌತಮ್ ಗಂಭೀರ್ 75 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು.
ಭಾರತ ನೀಡಿದ್ದ ಗೆಲುವಿನ ಸವಾಲನ್ನು ಪಾಕಿಸ್ತಾನಕ್ಕೆ ಬೆನ್ನಟ್ಟುವುದು ಸುಲಭ ಎಂದು ಭಾವಿಸಲಾಗಿತ್ತು. ಆದರೆ ಪಾಕಿಸ್ತಾನ ಗೆಲುವಿನ ಸನಿಹದಲ್ಲಿ ಎಡವಿತ್ತು. ಆರಂಭಿಕ ಬ್ಯಾಟ್ಸ್ ಮನ್ ಮುಹಮ್ಮದ್ ಹಫೀಜ್ ಮೊದಲ ಓವರ್‌ನಲ್ಲಿ ನಿರ್ಗಮಿಸಿದ ನಂತರ, ಪಾಕಿಸ್ತಾನದ ಬ್ಯಾಟಿಂಗ್ ಸೊರಗಿತ್ತು. ಉತ್ತಮ ಜೊತೆಯಾಟ ಕಂಡು ಬರಲಿಲ್ಲ. ಗೆಲುವಿಗೆ ಅಂತಿಮ 4 ಓವರ್‌ನಲ್ಲಿ 54 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆಗ ಪಾಕಿಸ್ತಾನದ ಸ್ಕೋರ್ 7 ವಿಕೆಟ್ ನಷ್ಟದಲ್ಲಿ 104 ರನ್.
ಮಿಸ್ಬಾ ಉಲ್ ಹಕ್ ಕ್ರೀಸ್‌ನಲ್ಲಿರುವ ತನಕ ಪಾಕ್‌ಗೆ ಗೆಲುವಿನ ನಿರೀಕ್ಷೆ ಇತ್ತು.ಅವರು 17ನೇ ಓವರ್‌ನಲ್ಲಿ ಹರ್ಭಜನ್ ಸಿಂಗ್ ಎಸೆತಗಳಲ್ಲಿ ಮೂರು ಬಾರಿ ಸಿಕ್ಸರ್ ಎತ್ತಿದರು. ಸೊಹೈಲ್ ತನ್ವೀರ್ ಅವರು ಶ್ರೀಶಾಂತ್ ಅವರ ಮುಂದಿನ ಓವರ್‌ನಲ್ಲಿ ಎರಡು ಸಿಕ್ಸರ್ ಬಾರಿಸಿದರು.
19ನೇ ಓವರ್ ಮುಕ್ತಾಯಗೊಂಡಾಗ ಪಾಕಿಸ್ತಾನ ಒಂಬತ್ತು ವಿಕೆಟ್ ನಷ್ಟದಲ್ಲಿ 145 ರನ್ ಗಳಿಸಿತ್ತು. ಅಂತಿಮ ಓವರ್‌ನಲ್ಲಿ 13 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು. ಅಂತಿಮ ಓವರ್‌ನಲ್ಲಿ ಪಾಕ್ ತಂಡವನ್ನು ಕಟ್ಟಿ ಹಾಕುವ ಜವಾಬ್ದಾರಿಯನ್ನು ಬಲಗೈ ಮಧ್ಯಮ ವೇಗಿ ಜೋಗಿಂದರ್ ಶರ್ಮಾ ಅವರಿಗೆ ನೀಡಲಾಗಿತ್ತು. 20ನೇ ಓವರ್‌ನ ಮೊದಲ ಎಸೆತ ವೈಡ್ ಆಗಿತ್ತು. 19. 1ನೇ ಓವರ್‌ನಲ್ಲಿ ರನ್ ಬರಲಿಲ್ಲ. 19.2ನೇ ಓವರ್‌ನಲ್ಲಿ ಮಿಸ್ಬಾ ಸಿಕ್ಸರ್ ಬಾರಿಸಿದರು.
ಅಂತಿಮ 4 ಎಸೆತಗಳಲ್ಲಿ ಪಾಕ್ ಗೆಲುವಿಗೆ 6 ರನ್ ಗಳಿಸಬೇಕಿತ್ತು. ಮಿಸ್ಬಾ ಅವರ ಆಕ್ರಮಣಕಾರಿ ಆಟ ಪಾಕಿಸ್ತಾನವನ್ನು ಗೆಲುವಿನ ಸಮೀಪಕ್ಕೆ ತಲುಪಿತ್ತು. ಆದರೆ 19.3ನೇ ಓವರ್‌ನಲ್ಲಿ ಜೋಗಿಂದರ್ ಶರ್ಮಾ ಅವರ ಎಸೆತದಲ್ಲಿ ಶಾರ್ಟ್ ಫೈನ್ ಲೆಗ್ ಮೂಲಕ ಬಂದ ಚೆಂಡನ್ನು ಮಿಸ್ಬಾ ಸ್ಕೂಪ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಎತ್ತರಕ್ಕೆ ಹಾರಿತು. ಶ್ರೀಶಾಂತ್ ಕ್ಯಾಚ್ ತೆಗೆದುಕೊಳ್ಳುವುದರೊಂದಿಗೆ ಪಾಕಿಸ್ತಾನ 19.3 ಓವರ್‌ಗಳಲ್ಲಿ 152 ರನ್‌ಗೆ ಆಲೌಟಾಗಿ 5 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು. ಭಾರತ ಐಸಿಸಿ ಚೊಚ್ಚಲ ಟ್ವೆಂಟಿ-20ವಿಶ್ವಕಪ್ ಚಾಂಪಿಯನ್ ಆಗಿ ದಾಖಲೆ ಬರೆಯಿತು.
ಚಾಂಪಿಯನ್ ಭಾರತ ತಂಡಕ್ಕೆ ಬಿಸಿಸಿಐ ಎರಡು ಎರಡು ಮಿಲಿಯನ್ ಡಾಲರ್ ಬಹುಮಾನವನ್ನು ನೀಡಿತು. ಭಾರತದ ಈ ಯಶಸ್ಸಿನ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಜನ್ಮಕ್ಕೂ ಕಾರಣವಾಯಿತು.
ಆಘಾತಕಾರಿ ಸಂಗತಿಯೆಂದರೆ, ಜೋಗಿಂದರ್ ಶರ್ಮಾ ಭಾರತಕ್ಕಾಗಿ ಮತ್ತೊಂದು ಟ್ವೆಂಟಿ- 20 ಪಂದ್ಯವನ್ನು ಆಡಲಿಲ್ಲ! ಬಹುಶಃ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಜೋಗಿಂದರ್ ತಮ್ಮ ಹೆಸರನ್ನು ಭದ್ರಪಡಿಸಿದ್ದಾರೆ.







