ಟ್ವೆಂಟಿ-20 ಪಂದ್ಯಕ್ಕೆ ಪಾದಾರ್ಪಣೆಗೈದ ಕಿರಿಯ ಆಟಗಾರ್ತಿ ಶಫಾಲಿ ವರ್ಮಾ

ಅಹ್ಮದಾಬಾದ್, ಸೆ.24: ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ಮಧ್ಯೆ ಸೂರತ್‌ನಲ್ಲಿ ಮಂಗಳವಾರ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತದ ಕ್ಯಾಪ್ ಧರಿಸಿದ ಶಫಾಲಿ ವರ್ಮಾ ಟಿ-20 ಕ್ರಿಕೆಟ್‌ಗೆ ಕಾಲಿಟ್ಟ ಭಾರತದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿ ಎನಿಸಿಕೊಂಡರು.
ಶಫಾಲಿ(15 ವರ್ಷ, 239 ದಿನಗಳು)ಅವರು ಗಾರ್ಗಿ ಬ್ಯಾನರ್ಜಿ(14 ವರ್ಷ, 165 ದಿನಗಳು, 1978ರಲ್ಲಿ ಇಂಗ್ಲೆಂಡ್ ವಿರುದ್ಧ)ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸಿದ ಭಾರತದ ಎರಡನೇ ಕಿರಿಯ ವಯಸ್ಸಿನ ಆಟಗಾರ್ತಿಯಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಆರು ಶತಕ ಹಾಗೂ ಮೂರು ಅರ್ಧಶತಕಗಳ ಸಹಿತ 1,923 ರನ್ ಗಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶಫಾಲಿ ಭಾರತ ತಂಡಕ್ಕೆ ಪ್ರವೇಶ ಪಡೆದಿದ್ದಾರೆ. ದಕ್ಷಿಣ ಆಫ್ರಿಕದ ವೇಗದ ಬೌಲರ್ ಶಬ್ನಿಮ್ ಇಸ್ಮಾಯಿಲ್‌ಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಶಫಾಲಿ ತನ್ನ ಚೊಚ್ಚಲ ಪಂದ್ಯದಲ್ಲಿ ನಿರಾಸೆಗೊಳಿಸಿದರು.
ಐದು ವರ್ಷಗಳ ಹಿಂದೆ ಶಫಾಲಿ ಕ್ರಿಕೆಟ್‌ಗೆ ಆಕರ್ಷಿತರಾಗಲು ಸಚಿನ್ ತೆಂಡುಲ್ಕರ್ ಸ್ಫೂರ್ತಿಯಾಗಿದ್ದರು. ‘‘ಸ್ಟೇಡಿಯಂನ ಒಳಗೆ ಸಚಿನ್ ತೆಂಡುಲ್ಕರ್‌ರನ್ನು ನೋಡಲು ಎಷ್ಟು ಜನರು ನೆರೆದಿದ್ದರೋ, ಅಷ್ಟೇ ಜನ ಕ್ರೀಡಾಂಗಣದ ಹೊರಗೂ ಇದ್ದರು. ಆಗ ನನ್ನಲ್ಲಿ ಭಾರತದ ಕ್ರಿಕೆಟಿಗಳಾಗಬೇಕೆಂಬ ಬಯಕೆ ಮೊಳಕೆ ಒಡೆಯಿತು’’ ಎಂದು ಶಫಾಲಿ ಹೇಳಿದ್ದಾರೆ.





