ವಿಜಯ ಹಝಾರೆ ಟ್ರೋಫಿಗಾಗಿ ಏಕದಿನ ಟೂರ್ನಮೆಂಟ್ ಆರಂಭ
ಹೊಸದಿಲ್ಲಿ, ಸೆ.24: ಭಾರತದ ಪ್ರಮುಖ ದೇಶೀಯ ಏಕದಿನ ಟೂರ್ನಮೆಂಟ್ ವಿಜಯ ಹಝಾರೆ ಟ್ರೋಫಿ ಸೆ.24ರಿಂದ ಆರಂಭವಾಗಿದ್ದು, 38 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.
ವಿಜಯ ಹಝಾರೆ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಅಕ್ಟೋಬರ್ 20ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಅಕ್ಟೋಬರ್ 25ರಂದು ನಡೆಯಲಿದೆ.
ಟೂರ್ನಮೆಂಟ್ ನಾಲ್ಕು ನಗರಗಳಾದ-ಬೆಂಗಳೂರು, ವಡೋದರ, ಜೈಪುರ ಹಾಗೂ ಡೆಹ್ರಾಡೂನ್‌ನಲ್ಲಿ ನಡೆಯಲಿದೆ. ಎಲೈಟ್ ಗ್ರೂಪ್‌ಗಳಾದ ಎ, ಬಿ ಹಾಗೂ ಸಿಗಳ ಎಲೈಟ್ ಪಂದ್ಯಗಳು ಕ್ರಮವಾಗಿ ಬೆಂಗಳೂರು, ವಡೋದರ ಹಾಗೂ ಜೈಪುರದಲ್ಲಿ ನಡೆಯಲಿದೆ. ಡೆಹ್ರಾಡೂನ್ ಪ್ಲೇಟ್ ಗ್ರೂಪ್ ಪಂದ್ಯಗಳ ಆತಿಥ್ಯವಹಿಸಿಕೊಳ್ಳಲಿದೆ. ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ವಿಜಯ ಹಝಾರೆ ಟ್ರೋಫಿಯ ಮಾದರಿಯನ್ನು ಬದಲಿಸಲಾಗಿಲ್ಲ. ಎ ಹಾಗೂ ಬಿ ಗುಂಪಿನ ಅಗ್ರ 5 ತಂಡಗಳು ಸಿ ಹಾಗೂ ಡಿ ಗುಂಪಿನ ಅಗ್ರ-2 ತಂಡಗಳು ಕ್ವಾರ್ಟರ್ ಫೈನಲ್‌ಗೆ ತಲುಪುತ್ತವೆ. ರಿಷಭ್ ಪಂತ್(ದಿಲ್ಲಿ), ಶಿಖರ್ ಧವನ್(ದಿಲ್ಲಿ)ಕೆ.ಎಲ್. ರಾಹುಲ್, ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್ (ಕರ್ನಾಟಕ), ಶ್ರೇಯಸ್ ಅಯ್ಯರ್(ಮುಂಬೈ), ಅಂಬಟಿ ರಾಯುಡು(ಹೈದರಾಬಾದ್), ದಿನೇಶ್ ಕಾರ್ತಿಕ್, ವಾಶಿಂಗ್ಟನ್ ಸುಂದರ್ ಹಾಗೂ ವಿಜಯ್ ಶಂಕರ್(ತಮಿಳುನಾಡು), ಕೇದಾರ್ ಜಾಧವ್(ಮಹಾರಾಷ್ಟ್ರ)ಹಾಗೂ ಕೃನಾಲ್ ಪಾಂಡ್ಯ(ಬರೋಡ) ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಹಾಲಿ ಚಾಂಪಿಯನ್ ಮುಂಬೈ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿದೆ. ಪಂತ್ ಹಾಗೂ ಧವನ್ ಉಪಸ್ಥಿತಿಯಲ್ಲಿ ರನ್ನರ್ಸ್-ಅಪ್ ದಿಲ್ಲಿ ಕೂಡ ಪೈಪೋಟಿ ನೀಡಲು ಸಜ್ಜಾಗಿದೆ. ತಮಿಳುನಾಡು ಹಾಗೂ ಕರ್ನಾಟಕ ಯಾವುದೇ ತಂಡವನ್ನು ಮಣಿಸುವ ಸಾಮರ್ಥ್ಯ ಹೊಂದಿವೆ.







