ಗಾಯಾಳು ಬುಮ್ರಾ ಬದಲಿಗೆ ಉಮೇಶ್ ಯಾದವ್‌ಗೆ ಸ್ಥಾನ
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ

ಹೊಸದಿಲ್ಲಿ, ಸೆ.24: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಭಾರತದ ಟೆಸ್ಟ್ ತಂಡದಲ್ಲಿ ಗಾಯಾಳು ಜಸ್‌ಪ್ರೀತ್ ಬುಮ್ರಾ ಬದಲಿಗೆ ಉಮೇಶ್ ಯಾದವ್ ಸ್ಥಾನ ಪಡೆದಿದ್ದಾರೆ. ಬುಮ್ರಾ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಬುಮ್ರಾ ಬೆನ್ನಿಗೆ ಗಾಯವಾಗಿರುವ ವಿಚಾರ ರೇಡಿಯೊಲಾಜಿಕಲ್ ಸ್ಕ್ರೀನಿಂಗ್ ಮೂಲಕ ಪತ್ತೆಯಾಗಿದೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. ಬುಮ್ರಾ ಈಗ ಬೆಂಗಳೂರಿನ ಎನ್‌ಸಿಎ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ ಮೇಲ್ವಿಚಾರಣೆ ನಡೆಸಲಿದೆ.
ಬುಮ್ರಾ ತನ್ನ ತವರಿನಲ್ಲಿ ಮೊದಲ ಟೆಸ್ಟ್ ಆಡಲು ಇನ್ನಷ್ಟು ದಿನ ಕಾಯಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬುಮ್ರಾ ಉತ್ತಮ ಫಾರ್ಮ್ ನಲ್ಲಿದ್ದಾರೆ. 12 ಟೆಸ್ಟ್‌ಗಳಲ್ಲಿ 62 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿದೇಶದಲ್ಲಿ ನಡೆದ ಸರಣಿಯಲ್ಲಿ ಅವರು ಯಶಸ್ಸು ಗಳಿಸಿದ್ದಾರೆ.
ಭರ್ಜರಿ ಫಾರ್ಮ್‌ನಲ್ಲಿರುವ ಬುಮ್ರಾ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 13 ವಿಕೆಟ್ ಪಡೆದಿದ್ದರು. ಇದರಲ್ಲಿ ಎರಡು ಬಾರಿ ಐದು ವಿಕೆಟ್‌ಗಳ ಗೊಂಚಲು ಮತ್ತು ಹ್ಯಾಟ್ರಿಕ್ ವಿಕೆಟ್ ಸೇರಿವೆ.
ದಕ್ಷಿಣ ಆಫ್ರಿಕಾ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಸರಣಿಯಲ್ಲಿ ಉಭಯ ತಂಡಗಳು 1-1 ಗೆಲುವಿನೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿವೆ. ವಿಶ್ವಕಪ್ ನಂತರದ ವೆಸ್ಟ್ ಇಂಡೀಸ್ ಪ್ರವಾಸದ ಸೀಮಿತ ಓವರ್‌ಗಳ ಟೂರ್ನಿಯಲ್ಲೂ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಕಳೆದ ಮೂರು ವರ್ಷಗಳಿಂದ ತವರಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಉಮೇಶ್ ಯಾದವ್ ಅವರು ಬುಮ್ರಾ ಬದಲಿಗೆ ಅರ್ಹವಾಗಿಯೇ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳನ್ನು ಪಡೆದಿದ್ದರು.
ಆಸ್ಟ್ರೇಲಿಯದಲ್ಲಿ ಯಾದವ್ ಕೇವಲ ಒಂದು ಟೆಸ್ಟ್ ಆಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿರಲಿಲ್ಲ. ದಕ್ಷಿಣ ಆಫ್ರಿಕಾ ಸರಣಿಗೆ ಭಾರತೀಯ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಶರ್ಮಾ ಮತ್ತು ಮುಹಮ್ಮದ್ ಶಮಿ ಇದ್ದಾರೆ. ಅಕ್ಟೋಬರ್ 2 ರಂದು ವಿಶಾಖಪಟ್ಟಣಂನಲ್ಲಿ ಮೊದಲ ಟೆಸ್ಟ್ ಪ್ರಾರಂಭವಾಗಲಿದೆ.







