ಮಂಜೇಶ್ವರದ ಚರ್ಚ್ ದಾಳಿ ಪ್ರಕರಣದ ತನಿಖೆ ಕ್ರೈಂ ಬ್ರಾಂಚ್‌ಗೆ

ಕಾಸರಗೋಡು, ಸೆ.24: ಮಂಜೇಶ್ವರ ಅವರ್ ಲೇಡಿ ಆಫ್ ಮರ್ಸಿ ಚರ್ಚ್ ಮೇಲೆ ನಡೆದ ದಾಳಿ ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ಒಪ್ಪಿಸಿ ಸರಕಾರ ಆದೇಶ ಹೊರಡಿಸಿದೆ.
ಕೃತ್ಯ ನಡೆದು ಒಂದು ತಿಂಗಳು ಕಳೆದರೂ ಆರೋಪಿಗಳನ್ನು ಬಂಧನವಾಗಿಲ್ಲ. ಈ ಹಿನ್ನಲೆಯಲ್ಲಿ ಕೆಥೊಲಿಕ್ ಸಭಾ ನೇತೃತ್ವದಲ್ಲಿ ಕ್ರೈಸ್ತರು ಪ್ರತಿಭಟನೆ ಮುಂದಾಗಿದ್ದರು. ಜಿಲ್ಲಾಧಿಕಾರಿ ಕಚೇರಿ ಮತ್ತು ಎಸ್ಪಿ ಕಚೇರಿ ಪರಿಸರದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ನಡುವೆ ಇದೀಗ ಪ್ರಕರಣವನ್ನು ಕ್ರೈಂ ಬ್ರಾಂಚ್ ಪೊಲೀಸರಿಗೆ ಒಪ್ಪಿಸಲಾಗಿದೆ.
ಆಗಸ್ಟ್ 19ರಂದು ಮುಂಜಾನೆ ಚರ್ಚ್ ಮೇಲೆ ದಾಳಿ ನಡೆದಿತ್ತು, ಬೈಕಿನಲ್ಲಿ ಬಂದ ಇಬ್ಬರ ಪೈಕಿ ಓರ್ವ ಆವರಣದೊಳಗೆ ನುಗ್ಗಿ ಚರ್ಚ್ ಮೇಲೆ ಕಲ್ಲೆಸದಿದ್ದನು. ಇದರಿಂದ ಕಿಟಕಿಯ ಗಾಜಿಗೆ ಹಾನಿಯಾಗಿತ್ತು. ಕೃತ್ಯ ನಡೆದ ದಿನವೇ ಬೇಡಡ್ಕ ಠಾಣಾ ಸರ್ಕಲ್ ಇನ್‌ಸ್ಪೆಕ್ಟರ್ ಉತ್ತಮ್ ದಾಸ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡವು ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ವಿಚಾರಗೆ ಒಳಪಡಿಸಿದ್ದರೂ ಯಾರನ್ನೂ ಬಂಧಿಸಲು ಸಾಧ್ಯವಾಗಿರಲಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.
ಇದೀಗ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ಒಪ್ಪಿಸಿರುವುದರಿಂದ ಕೆಥೊಲಿಕ್ ಸಭಾ ನೇತೃತ್ವದಲ್ಲಿ ನಡೆಸಲುದ್ದೇಶಿಸಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







