ಪೊಲೀಸರ ಕಿರುಕುಳ ಮುಂದುವರೆದರೆ ಸಾಮೂಹಿಕ ಆತ್ಮಹತ್ಯೆ: ಹಾಸನದ ಕುಟುಂಬದ ಎಚ್ಚರಿಕೆ

ಹಾಸನ, ಸೆ.24: ನಮ್ಮ ಕುಟುಂಬಗಳಿಗೆ ಪೊಲೀಸರು ಹಿಂಸೆ ನೀಡುತ್ತಿದ್ದು, ಕೂಡಲೇ ನಿಲ್ಲಿಸದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಕುಟುಂಬದ ಎಲ್ಲ ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಗೆ ಶರಣಾಗುವುದಾಗಿ ವೆಂಕಟೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ನಮ್ಮ ಅಳಿಯ ಸಂತೋಷ್ ಅವರನ್ನು ಆಭರಣ ಕಳವು ಪ್ರಕರಣದಲ್ಲಿ ಬಂಧಿಸಿದ ನಂತರ ಪೊಲೀಸರ ಕಿರುಕುಳ ಪ್ರಾರಂಭವಾಯಿತು. ಪ್ರತಿದಿನ ಪೊಲೀಸರು ವಿಚಾರಣೆ ನೆಪದಲ್ಲಿ ನಮ್ಮ ಕುಟುಂಬದ ಎಲ್ಲರಿಗೂ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪೊಲೀಸರು ವಿಚಾರಣೆ ನೆಪದಲ್ಲಿ ರಾತ್ರೋರಾತ್ರಿ ಮನೆಗೆ ಆಗಮಿಸಿ, ಯಾವುದೇ ದಾಖಲೆ ಇಲ್ಲದೆ ನಮ್ಮನ್ನು ವಿಚಾರಣೆ ಮಾಡುತ್ತಿದ್ದಾರೆ. ಅಲ್ಲದೆ ಕೋಲಾರ, ರಾಮನಗರ ಹಾಗೂ ಮಂಡ್ಯ ಸೇರಿದಂತೆ ನೆರೆಯ ಠಾಣೆಯ ಪೊಲೀಸರೇ ನಮಗೆ ತೊಂದರೆ ನೀಡುತ್ತಿದ್ದಾರೆ. 5 ವರ್ಷದಿಂದ ಸಂತೋಷ್ ಅವರ ಮೇಲೆ 20ಕ್ಕೂ ಹೆಚ್ಚು ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ದೂರಿದರು.
"ಪೊಲೀಸರ ಕಿರುಕುಳ ತಾಳಲಾರದೆ ಸದ್ಯ ಸಂತೋಷ್ ವಿಷಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ' ಎಂದ ಅವರ ಪತ್ನಿ ಪ್ರಿಯಾ, ಕುಟುಂಬಕ್ಕೆ ನೆರವಾಗಿರುವ ಸಂತೋಷ್ ವಿರುದ್ಧ 5 ವರ್ಷದಿಂದ ಪೊಲೀಸರು ದೌರ್ಜನ್ಯವೆಸಗುತ್ತಿದ್ದಾರೆ. ಅಲ್ಲದೆ ವಿಚಾರಣೆ ನೆಪದಲ್ಲಿ ತಿಂಗಳುಗಟ್ಟಳೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದರು. ಈ ಪ್ರಕರಣ ಸಂಬಂಧ ನಮಗೆ ನ್ಯಾಯ ದೊರಕದೆ ಇದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಕುಟುಂಬದ ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಗೆ ಶರಣಾಗುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಅವರ ತಾಯಿ ಜಯಮ್ಮ ಹಾಗೂ ಹುಡುಗಿ ತಂದೆ ವೆಂಕಟರಾಮ್, ತಾಯಿ ನಾಗರತ್ನ ಇತರರು ಉಪಸ್ಥಿತರಿದ್ದರು.







