ಕೇಂದ್ರದ ನಡವಳಿಕೆ ಬಗ್ಗೆ ನಾನು ಹೇಳುವ ಅಗತ್ಯವಿಲ್ಲ: ಮಾಜಿ ಪ್ರಧಾನಿ ದೇವೇಗೌಡ

ಹೊಸದಿಲ್ಲಿ, ಸೆ. 25: ‘ಕೇಂದ್ರ ಸರಕಾರದ ದ್ವೇಷದ ರಾಜಕಾರಣ ಹೊಸದೇನಲ್ಲ. ಐದು ವರ್ಷದಿಂದ ಬಿಜೆಪಿ ಸರಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದನ್ನು ನಾನು ಹೇಳುವ ಅಗತ್ಯವಿಲ್ಲ’ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಟೀಕಿಸಿದ್ದಾರೆ.
ಬುಧವಾರ ದಿಲ್ಲಿಯಲ್ಲಿ ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್ ಭೇಟಿಗೆ ತೆರಳಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುದನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಎಂದೂ ಮರೆಯಬಾರದು ಎಂದು ಎಚ್ಚರಿಸಿದರು.
ಬಿಜೆಪಿಯನ್ನು ವಿರೋಧಿಸುವವರ ವಿರುದ್ದ ನಿರಂತರ ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂದು ದೂರಿದ ದೇವೇಗೌಡ, ತಾವಿಂದು ಪವಿತ್ರ ತೀರ್ಥ ಕ್ಷೇತ್ರವೊಂದರಲ್ಲಿ ಡಿ.ಕೆ.ಶಿವಕುಮಾರ್‌ಗೆ ಒಳಿತಾಗಲೆಂದು ಪೂಜೆ ಸಲ್ಲಿಸಿ ಬಂದಿದ್ದೇನೆ ಎಂದು ಹೇಳಿದರು.
ಜಾಮೀನು ವಿಶ್ವಾಸ: ದೇವರ ದಯೆಯಿಂದ ಶಿವಕುಮಾರ್‌ಗೆ ಜಾಮೀನು ದೊರೆತು ಅವರು ಬಿಡುಗಡೆಯಾಗುವ ವಿಶ್ವಾಸವಿದೆ ಎಂದ ಅವರು, ಜೈಲಿನಲ್ಲಿರುವ ಶಿವಕುಮಾರ್ ಅವರನ್ನು ಭೇಟಿಯಾಗುವ ಉದ್ದೇಶದಿಂದಲೇ ದಿಲ್ಲಿಗೆ ಆಗಮಿಸಿದ್ದೇನೆ. ಆದರೆ, ಎರಡು ದಿನ ಮೊದಲೇ ಭೇಟಿಗೆ ಅನುಮತಿ ಪಡೆಯಬೇಕೆಂದು ಜೈಲು ಅಧಿಕಾರಿಗಳು ಹೇಳಿದ್ದರಿಂದ ಶಿವಕುಮಾರ್ ಭೇಟಿ ಸಾಧ್ಯವಾಗಲಿಲ್ಲ ಎಂದರು.
ಇದೇ ವೇಳೆ ಸಂಸದ ಡಿ.ಕೆ.ಸುರೇಶ್, ದೇವೇಗೌಡ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಆ ಬಳಿಕ ಮಾತನಾಡಿದ ಡಿ.ಕೆ.ಸುರೇಶ್, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಚಿವ ರೇವಣ್ಣ ಸಹೋದರ ಡಿ.ಕೆ. ಶಿವಕುಮಾರ್ ಅವರ ಭೇಟಿಗೆ ಆಗಮಿಸಿದ್ದರು. ಆದರೆ, ಜೈಲಿನ ಅಧಿಕಾರಿಗಳು ಭೇಟಿಗೆ ಅವಕಾಶ ನೀಡಿಲ್ಲ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೂ ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಶಿವಕುಮಾರ್ ಅವರ ಜಾಮೀನು ಅರ್ಜಿ ತೀರ್ಪು ಇಂದು ಬರುವ ಸಾಧ್ಯತೆಗಳಿದ್ದು, ಸಹೋದರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಇದೇ ವೇಳೆ ವಿಶ್ವಾಸವಿದೆ ಎಂದರು.







