ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ

ಬೆಂಗಳೂರು, ಸೆ. 25: ‘ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಆದರೆ, ನಾನು ಮಾಗಡಿ ಕ್ಷೇತ್ರವನ್ನು ಬದಲಿಸುವುದಿಲ್ಲ ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಬದಲಿಸಿದರೆ, ಊರಿಂದ ಊರಿಗೆ ಹೋಗುವ ಗೌಡನ ಸ್ಥಿತಿ ಏನಾಗುತ್ತದೆ ಎಂಬುವುದು ನಮಗೆ ಗೊತ್ತಿದೆ. ನಾನು ನಮ್ಮೂರು ಗೌಡನಾಗಿಯೇ ಇರುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ಮಾಗಡಿ ಕ್ಷೇತ್ರವನ್ನು ನಾನು ಯಾವುದೇ ಕಾರಣಕ್ಕೂ ಬದಲಿಸುವುದಿಲ್ಲ. ಹೀಗಾಗಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಈಗಾಗಲೇ ವಿಚ್ಚೇಧನ ಆಗಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರು ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಯಾರೂ ‘ಹದ್ದು’ ಅಲ್ಲ, ಯಾರು ‘ಗಿಳಿ’ಯು ಅಲ್ಲ. ಈ ಹದ್ದು-ಗಿಳಿ ಚರ್ಚೆ ಮುಂದುವರಿಸುವುದು ಸಾಧುವಲ್ಲ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಹೈಕಮಾಂಡ್ ಬೆಂಬಲದಿಂದ ಮುಖ್ಯಮಂತ್ರಿ ಯಾಗಿರುವುದಾಗಿ ಹೇಳಿದ್ದಾರೆ. ದೇವೇಗೌಡ, ಸಿದ್ದರಾಮಯ್ಯನವರ ಪರಸ್ಪರ ವಿರುದ್ಧ ನಿಲುವು ಹೊಂದಿದ್ದರೂ ಮೈತ್ರಿ ಸರಕಾರಕ್ಕೆ ಬೆಂಬಲ ನೀಡಿದ್ದರು ಎಂದು ಸ್ಮರಿಸಿದರು.
ಮನೆಯ ಯಜಮಾನನಾದ ಮೇಲೆ ಎಲ್ಲರನ್ನೂ ವಿಶ್ವಾಸದಿಂದ ನಡೆಸಿಕೊಂಡು 5 ವರ್ಷ ಅಧಿಕಾರ ನಡೆಸಬಹುದಿತ್ತು. ಕೇವಲ ಕಾಂಗ್ರೆಸ್ ಪಕ್ಷದ ಶಾಸಕರು ಬಿಟ್ಟು ಹೋಗಿರುವುದರಿಂದ ಮೈತ್ರಿ ಸರಕಾರಕ್ಕೆ ತೊಂದರೆಯಾಗಿಲ್ಲ, ಜೆಡಿಎಸ್ ಶಾಸಕರು ಪಕ್ಷ ತೊರೆದು ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರ ಮೇಲೆ ಆರೋಪ ಹೊರಿಸುವುದು ಸಲ್ಲ ಎಂದು ಬಾಲಕೃಷ್ಣ ತಿರುಗೇಟು ನೀಡಿದರು.
ವೀರಾವೇಷದ ಮಾತುಗಳನ್ನಾಡಿ ಉಪ ಚುನಾವಣೆಯಲ್ಲಿ ಒಂದು ಜನಾಂಗದ ಓಲೈಕೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲವು ಮುಗಿದ ಮೇಲೆ ಇಂತಹ ಚರ್ಚೆಯನ್ನು ಬದಿಗಿಟ್ಟು ಗೌರವಯುತವಾಗಿ ನಡೆದುಕೊಳ್ಳುವುದು ಸೂಕ್ತ ಎಂದು ಬಾಲಕೃಷ್ಣ ಸಲಹೆ ಮಾಡಿದರು.