ಟಿಕೆಟ್ ಕೈ ತಪ್ಪಿದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ: ಬಿಜೆಪಿ ನಾಯಕ ಯು.ಬಿ.ಬಣಕಾರ್
ಬೆಂಗಳೂರು, ಸೆ.25: ಕಳೆದ ಹಲವಾರು ವರ್ಷಗಳಿಂದ ಬಿಜೆಪಿಗಾಗಿ ದುಡಿಯುತ್ತಿದ್ದೇನೆ, ಕೆಲವು ಸಲ ಸೋಲುಂಡರೂ ಸಂಭಾಳಿಸಿಕೊಂಡು ಪಕ್ಷ ನಿಷ್ಠೆ ಮೆರೆದಿದ್ದೇನೆ. ಈ ಬಾರಿ ಏನಾದರೂ ಟಿಕೆಟ್ ಕೈ ತಪ್ಪಿದರೆ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದಿದ್ದಾರೆ ಹಿರೇಕೆರೂರು ಕ್ಷೇತ್ರದ ಬಿಜೆಪಿ ನಾಯಕ ಯು.ಬಿ.ಬಣಕಾರ್ ಹೇಳಿದ್ದಾರೆ.
ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಅನರ್ಹ ಶಾಸಕ ಬಿ.ಸಿ.ಪಾಟೀಲ್, ಮಾಜಿ ಶಾಸಕ ಯು.ಬಿ.ಬಣಕಾರ್ ನಡುವೆ ಭಾರೀ ಪೈಪೋಟಿ ಉಂಟಾಗಿದೆ ಎನ್ನಲಾಗುತ್ತಿದ್ದು, ಟಿಕೆಟ್ ಕೈತಪ್ಪಿದರೆ, ಸ್ವತಂತ್ರ ಅಭ್ಯರ್ಥಿಯಾಗಿಯೇ ಚುನಾವಣೆ ಎದುರಿಸಲಿದ್ದೇನೆ ಎಂದು ಬಣಕಾರ್ ನಾಯಕರಿಗೆ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಸಂಧಾನ ವಿಫಲ?: ಬಂಡಾಯದ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಬಿ.ಸಿ. ಪಾಟೀಲ್ ಮತ್ತು ಯು.ಬಿ.ಬಣಕಾರ್ ಅವರೊಂದಿಗೆ ಸಭೆ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಆದರೆ, ಮನವೊಲಿಕೆಗೆ ಒಪ್ಪದ ಯು.ಬಿ.ಬಣಕಾರ್, ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡಲಿದೆ. ಅಷ್ಟೇ ಅಲ್ಲದೆ, ಸ್ಥಳೀಯ ಕಾರ್ಯಕರ್ತರು, ಮುಖಂಡರಿಗೂ ನನ್ನ ಮೇಲೆಯೇ ಅಭಿಮಾನ ಇದೆ. ಪಕ್ಷ ಸಂಘಟನೆಗೆ ದುಡಿದಿದ್ದೇನೆ. ಹೀಗಿರುವಾಗ, ಇನ್ನೊಬ್ಬ ಅಭ್ಯರ್ಥಿಗೆ ಮತ ನೀಡುವಂತೆ ಹೇಗೆ ಕೇಳಲಿ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಷ ಕುಡಿಯುತ್ತೇವೆ?: ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 555 ಮತಗಳ ಅಂತರದಿಂದ ಬಣಕಾರ ಸೋತಿದ್ದರು. ಈ ಬಾರಿ ಗೆಲುವು ಸಾಧಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ, ಅವರಿಗೆ ಟಿಕೆಟ್ ತಪ್ಪಿಸಲು ಷಡ್ಯಂತ್ರ ನಡೆಯುತ್ತಿದ್ದು, ಒಂದು ವೇಳೆ, ಬೇರೆ ಅಭ್ಯರ್ಥಿ ಸ್ಪರ್ಧಿಸಿದರೆ ವಿಷ ಕುಡಿಯತ್ತೇವೆ ಎಂದು ಹಿರೇಕೆರೂರು ಕ್ಷೇತ್ರ ಕಾರ್ಯಕರ್ತ ಬಸವರಾಜ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.