ಆವಿಷ್ಕಾರಗಳಿಗೆ ಪೇಟೆಂಟ್ ಹಕ್ಕನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ: ಶಿಕ್ಷಣ ಸಂಸ್ಥೆಗಳಿಗೆ ಎಐಸಿಟಿಇ ನಿರ್ದೇಶ

ಹೊಸದಿಲ್ಲಿ,ಸೆ.25: ಮಹತ್ವದ ಕ್ರಮವೊಂದರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯು ನೂತನ ಉತ್ಪನ್ನ ಅಥವಾ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುವಾಗ ಶಿಕ್ಷಣ ಸಂಸ್ಥೆಯ ಸೌಲಭ್ಯಗಳನ್ನು ಬಳಸಿದ್ದರೆ ಅವುಗಳ ಪೇಟೆಂಟ್ ಅಥವಾ ಹಕ್ಕುಸ್ವಾಮ್ಯವನ್ನು ಶಿಕ್ಷಣ ಸಂಸ್ಥೆಗಳು ಸಂಶೋಧಕರೊಂದಿಗೆ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.
ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧಕರು ಒಟ್ಟಾಗಿ ಯಾವುದೇ ವಾಣಿಜ್ಯ ಸಂಸ್ಥೆಗೆ ಉತ್ಪನ್ನದ ಹಕ್ಕುಸ್ವಾಮ್ಯ ಅಥವಾ ಬೌದ್ಧಿಕ ಆಸ್ತಿ ಹಕ್ಕನ್ನು ಬಳಸಿಕೊಳ್ಳಲು ಪರವಾನಿಗೆ ನೀಡಬಹುದು ಮತ್ತು ಇದರಲ್ಲಿ ಸಂಶೋಧಕರ ಸಹಮತಿಯು ಮುಖ್ಯವಾಗಿರುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.
ಎಐಸಿಟಿಇ ಇತ್ತೀಚಿಗೆ ಪ್ರಕಟಿಸಿರುವ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಬೋಧಕರಿಗಾಗಿ ರಾಷ್ಟ್ರೀಯ ಆವಿಷ್ಕಾರ ಮತ್ತು ಸ್ಟಾರ್ಟ್‌ಅಪ್ ನೀತಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ನಿಯಮವನ್ನು ಸ್ಪಷ್ಟಪಡಿಸಿದೆ. ಎಐಸಿಟಿಇ ಮೊದಲ ಬಾರಿಗೆ ಇಂತಹ ನೀತಿಯನ್ನು ತಂದಿದ್ದು,ಬೌದ್ಧಿಕ ಹಕ್ಕು ಒಡೆತನ ನಿರ್ವಹಣೆ,ತಂತ್ರಜ್ಞಾನ ಪರವಾನಿಗೆ ನೀಡಿಕೆ ಮತ್ತು ಸಾಂಸ್ಥಿಕ ಸ್ಟಾರ್ಟ್‌ಅಪ್ ನೀತಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪತೆಯನ್ನು ತರಲು ಸಚಿವಾಲಯಕ್ಕೆ ನೆರವಾಗುವುದು ಇದರ ಉದ್ದೇಶವಾಗಿದೆ.
ಸಂಶೋಧಕ-ಸ್ನೇಹಿ ನೀತಿಯೆಂದು ಪರಿಗಣಿಸಲಾಗಿರುವ ಇದು ವಿದ್ಯಾರ್ಥಿಗಳು ಅಥವಾ ಸಂಶೋಧಕರು ಅಥವಾ ಬೋಧಕರು ಶಿಕ್ಷಣ ಸಂಸ್ಥೆಯ ಸೌಲಭ್ಯ ಮತ್ತು ಹಣಕಾಸು ನೆರವುಗಳನ್ನು ಬಳಸಿಕೊಳ್ಳದೆ ಹಾಗೂ ಕರ್ತವ್ಯದ ಅವಧಿಯ ಹೊರಗೆ ಉತ್ಪನ್ನವನ್ನು ಅಭಿವೃದ್ಧಿಗೊಳಿಸಿದ್ದರೆ ಅದರ ಸಂಪೂರ್ಣ ಹಕ್ಕುಸ್ವಾಮ್ಯವನ್ನು ಪಡೆಯಲು ಅವರನ್ನು ಅರ್ಹರನ್ನಾಗಿಸಿದೆ.
ವಿವಾದವುಂಟಾದ ಸಂದರ್ಭದಲ್ಲಿ ಐವರು ಸದಸ್ಯರ ಸಮಿತಿಯೊಂದು ಪೇಟೆಂಟ್ ಒಡೆತನದ ಬಗ್ಗೆ ಅಂತಿಮ ನಿರ್ಣಯವನ್ನು ಕೈಗೊಳ್ಳುತ್ತದೆ.