ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೂಕಂಪ: ಮೃತರ ಸಂಖ್ಯೆ 34ಕ್ಕೆ

ಮುಝಫ್ಫರಾಬಾದ್ (ಪಾಕ್ ಆಕ್ರಮಿತ ಕಾಶ್ಮೀರ), ಸೆ. 25: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದ ಇತರ ಹಲವಾರು ಭಾಗಗಳಲ್ಲಿ ಮಂಗಳವಾರ ಸಂಜೆ ನಡೆದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 34ಕ್ಕೆ ಏರಿದೆ. ಅದೇ ವೇಳೆ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ 5.8ರಷ್ಟಿದ್ದ ತೀವ್ರತೆಯ ಭೂಕಂಪದ ಕೇಂದ್ರ ಬಿಂದು ಪಾಕ್ ಆಕ್ರಮಿತ ಕಾಶ್ಮೀರದ ಮಿರ್‌ಪುರ ನಗರಕ್ಕೆ ಸಮೀಪವಿತ್ತು ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿದೆ. ಮೀರ್‌ಪುರವು ಪಂಜಾಬ್‌ನ ಝೀಲಂ ನದಿಯಿಂದ ಉತ್ತರಕ್ಕೆ ಕೇವಲ 20 ಕಿಲೋಮೀಟರ್ ದೂರದಲ್ಲಿದೆ. ಭೂಕಂಪವು ಮೇಲ್ಮೈಯಿಂದ ಕೇವಲ 10 ಕಿ.ಮೀ. ಆಳದಲ್ಲಿ ಸಂಭವಿಸಿದೆ.
ಇದೇ ವಲಯದಲ್ಲಿ 14 ವರ್ಷಗಳ ಹಿಂದೆ ಸಂಭವಿಸಿದ ಭೀಕರ ಭೂಕಂಪದ ನೆನಪುಗಳನ್ನು ಈ ಭೂಕಂಪವು ನೆನಪಿಸಿದೆ.
ಭೂಕಂಪದಲ್ಲಿ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳಿದ್ದಾರೆ ಎಂದು ಪಾಕಿಸ್ತಾನದ ಪತ್ರಿಕೆ ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.





