ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ನೀಡಲು ಜೆಡಿಎಸ್ ಚಿಂತನೆ
34 ನೆಕ್ಕಿಲಾಡಿ ಗ್ರಾ.ಪಂ.: ಲಕ್ಷಾಂತರ ರೂ. ನೀರಿನ ಬಿಲ್ ವಸೂಲಾತಿಗೆ ಬಾಕಿ ಪ್ರಕರಣ
ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಲಕ್ಷಾಂತರ ರೂಪಾಯಿ ಕುಡಿಯುವ ನೀರಿನ ಬಿಲ್ ವಸೂಲಾತಿಗೆ ಬಾಕಿಯಿದೆ ಎಂಬ ಮಾಹಿತಿ ಇತ್ತೀಚೆಗಷ್ಟೇ ಹೊರಬಿದ್ದಿದೆ. ಇಷ್ಟೊಂದು ಮೊತ್ತ ಪಾವತಿಗೆ ಬಾಕಿಯಿದ್ದರೂ ಇಷ್ಟರವರೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿದ್ದದ್ದು ಯಾಕೆ? ಇಲ್ಲಿ ಕುಡಿಯುವ ನೀರಿನ ಹಣ ದುರುಪಯೋಗವಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಥವಾ ಲೋಕಾಯುಕ್ತಕ್ಕೆ ದೂರು ನೀಡಲು ಚಿಂತಿಸಲಾಗಿದೆ ಎಂದು ಜೆಡಿಎಸ್‍ನ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾರ್ಯಾಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್ ತಿಳಿಸಿದರು.
ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 34ನೇ ನೆಕ್ಕಿಲಾಡಿ ಗ್ರಾ.ಪಂ. ಇನ್ನೂ ಸಮರ್ಪಕ ಅಭಿವೃದ್ಧಿಯನ್ನೂ ಸಾಧಿಸಿಲ್ಲ. ಆರ್ಥಿಕವಾಗಿ ಸದೃಢವಾಗುವ ಉತ್ತಮ ಯೋಜನೆ ಇಲ್ಲಿ ಅನುಷ್ಠಾನವಾಗದ ಕಾರಣ ಇಲ್ಲಿ ಸ್ವಂತ ಅನುದಾನ ತೀರಾ ಕಡಿಮೆಯಿದೆ. ತೆರಿಗೆ ವಸೂಲಾತಿಗೆ ಸಿಬ್ಬಂದಿಯಿದ್ದರೂ ಸಮರ್ಪಕವಾಗಿ ತೆರಿಗೆ ವಸೂಲಾತಿ ಮಾಡುತ್ತಿಲ್ಲ. ಅಧಿಕಾರಿಗಳು ಸಿಬ್ಬಂದಿಗಳ ಕೆಲಸವನ್ನು ಸರಿಯಾಗಿ ಪರಾಮರ್ಶಿಸದ ಕಾರಣ ಈ ರೀತಿ ಆಗುವಂತಾಗಿದೆ. 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್‍ನ 460 ಕುಡಿಯುವ ನೀರಿನ ಸಂಪರ್ಕವಿದ್ದು, 2018-19ನೇ ವರದಿ ವರ್ಷದ ಮಾರ್ಚ್ ಅಂತ್ಯಕ್ಕೆ ಒಟ್ಟು 2,33,460 ರೂಪಾಯಿ ನೀರಿನ ಬಿಲ್ ವಸೂಲಾತಿಗೆ ಬಾಕಿ ಇದೆ. 2019-20ರ ವರದಿ ವರ್ಷದಲ್ಲಿಯೂ ಈವರೆಗೆ ನೀರಿನ ಬಿಲ್ ವಸೂಲಿಗೆ ಬಾಕಿ ಇದೆ. ಇಷ್ಟು ಪ್ರಮಾಣದಲ್ಲಿ ಗ್ರಾ.ಪಂ.ಗೆ ಬರಬೇಕಾದ ತೆರಿಗೆ ಹಣ ಪಾವತಿಯಾಗದಿದ್ದಾಗ ಇಷ್ಟರವರೆಗೆ ಅಧಿಕಾರಿಗಳು, ಬಿಲ್ ವಸೂಲಿಗಾರರು ಏನು ಮಾಡುತ್ತಿದ್ದರು. ಯಾಕೆ ಇದನ್ನು ಮೊದಲೇ ಗ್ರಾ.ಪಂ.ನ ಆಡಳಿತ ಮುಂದೆ ತಂದು ಗ್ರಾ.ಪಂ.ಗೆ ನಷ್ಟವುಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದರು.
ಗ್ರಾ.ಪಂ.ನಲ್ಲಿ ಪ್ರತಿ ದಿನ ಕಾರ್ಯದರ್ಶಿಯವರು ವಸೂಲಾದ ಪ್ರತಿಯೊಂದು ತೆರಿಗೆಯನ್ನು ಕಡತದಲ್ಲಿ ದಾಖಲಿಸಿ, ಹಣವನ್ನು ಬ್ಯಾಂಕಿಗೆ ತುಂಬುವಂತೆ ನೋಡಿಕೊಳ್ಳಬೇಕು. ಆಗ ಸರಿಯಾದ ರೀತಿಯಲ್ಲಿ ತೆರಿಗೆ ಪಾವತಿಯಾಗದಿದ್ದಲ್ಲಿ ತೆರಿಗೆ ಬಾಕಿವುಳಿಸಿದವರ ಬಗ್ಗೆ ಗ್ರಾ.ಪಂ. ಆಡಳಿತದ ಗಮನಕ್ಕೆ ತರಬೇಕು. ಆದರೆ ಇಲ್ಲಿ ಈ ಹಿಂದೆ ಕಾರ್ಯದರ್ಶಿಯಾಗಿದ್ದವರು ಅದನ್ನು ಯಾಕೆ ಮಾಡಿಲ್ಲ. ಇಲ್ಲಿ ಗ್ರಾ.ಪಂ.ನ ತೆರಿಗೆ ಹಣ ದುರುಪಯೋಗವಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ಸಮಗ್ರ ದಾಖಲೆ ಸಂಗ್ರಹಿಸಿ ಗ್ರಾ.ಪಂ.ನ ವಿರುದ್ಧ ಎಸಿಬಿ ಅಥವಾ ಲೋಕಾಯುಕ್ಕೆ ದೂರು ನೀಡಲು ಚಿಂತನೆ ನಡೆಸಿದ್ದೇವೆ ಎಂದರು.
ಈ ಮೊದಲು ಸುಮಾರು ಒಂದೂವರೆ ವರ್ಷಗಳಷ್ಟು ಕಾಲ 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಜತ್ತೂರು ಗ್ರಾ.ಪಂ.ನ ಕಾರ್ಯದರ್ಶಿಯಾಗಿದ್ದ ಚಂದ್ರಾವತಿಯವರು ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಭಾರ ಪಿಡಿಒ, ಕಾರ್ಯದರ್ಶಿಯಾಗಿಯೂ ಅವರು ಇಲ್ಲಿ ಕರ್ತವ್ಯ ಮಾಡಿದ್ದಾರೆ. ಅವರು ಇಲ್ಲಿ ಇದ್ದಷ್ಟು ದಿನ ಗ್ರಾಮದ ಅಭಿವೃದ್ಧಿಗೆ ಚಿಂತಿಸುವ ಬದಲು ರಾಜಕೀಯ ಮಾಡಿದ್ದೇ ಹೆಚ್ಚು. ಅವರಿರುವಾಗ ಯಾವುದೇ ಅಭಿವೃದ್ಧಿ ಕೆಲಸಗಳು ಇಲ್ಲಿ ನಡೆದಿಲ್ಲ. ಮಳೆಗಾಲ ಪೂರ್ವದಲ್ಲಿ ಆಗಬೇಕಾದ ಚರಂಡಿ ನಿರ್ಮಾಣ, ನಿರ್ವಹಣೆ ಕಾಮಗಾರಿಗಳೂ ನಡೆದಿರಲಿಲ್ಲ. ಕಳೆದ ಜುಲೈ ತಿಂಗಳಲ್ಲಿ ಅವರು ಗೋಳಿತೊಟ್ಟಿಗೆ ವರ್ಗಾವಣೆಯಾಗಿದ್ದು, ಆ ಬಳಿಕ ಸುಮಾರು ಒಂದೂವರೆ ವರ್ಷ ಇದ್ದ ದಾರಿ ದೀಪ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಕೆಲವು ವಾರ್ಡ್‍ಗಳಲ್ಲಿ ಸ್ವಚ್ಛತೆ ಕೆಲಸಗಳೂ ನಡೆದಿವೆ. ಅಲ್ಲದೇ, ತಮ್ಮ ಕೆಲಸ ಕಾರ್ಯಗಳಿಗೆ ಬರುವ ಜನಸಾಮಾನ್ಯರ ಕಡತಗಳನ್ನು ಸೂಕ್ತ ಸಮಯಕ್ಕೆ ವಿಲೇವಾರಿ ಮಾಡದೇ ಸುಮ್ಮನೆ ಅಲೆದಾಡಿಸುತ್ತಾರೆ ಸೇರಿದಂತೆ ಹಲವು ಆರೋಪಗಳು ಅವರ ಮೇಲಿವೆ. ಈಗ ಅವರು ಮತ್ತೆ 34 ನೆಕ್ಕಿಲಾಡಿ ಗ್ರಾ.ಪಂ.ಗೆ ಬರಲು ಹುನ್ನಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ದೊರಕಿದ್ದು, ಗ್ರಾಮದ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಇಂತಹ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಬೇಡ. 2018-19ರಲ್ಲಿ ಅವರು ಕಾರ್ಯದರ್ಶಿಯಾಗಿ ಇಲ್ಲಿ ಕರ್ತವ್ಯ ನಿರ್ವಹಿಸಿದ್ದು, ಆ ಸಂದರ್ಭದಲ್ಲಿನ ನೀರಿನ ಬಿಲ್ ವಸೂಲಾತಿ ಬಾಕಿ ಇದೀಗ ಪ್ರಸ್ತಾಪವಾಗಿರುವುದು. ಒಂದು ವೇಳೆ ಅಲ್ಲಿ ಹಣದ ದುರುಪಯೋಗ ನಡೆದಿದ್ದರೆ, ಅವರು ಮತ್ತೆ ಬಂದು ಅದನ್ನು ಮುಚ್ಚಿ ಹಾಕುವ ಸಾಧ್ಯತೆಯಿದೆ. ಒಂದು ವೇಳೆ ಮತ್ತೊಮ್ಮೆ ಅವರನ್ನು ಇಲ್ಲಿಗೆ ತಂದರೆ ಗ್ರಾಮಸ್ಥರನ್ನು ಸೇರಿಸಿಕೊಂಡು ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದ ಅಬ್ದುರ್ರಹ್ಮಾನ್ ಯುನಿಕ್, ನಮಗೆ ಓರ್ವ ದಕ್ಷ, ಭ್ರಷ್ಟಾಚಾರ ರಹಿತ, ಗ್ರಾಮದ ಅಭಿವೃದ್ಧಿ ಬಗ್ಗೆ ಇಚ್ಛಾಶಕ್ತಿಯಿರುವ ಕಾರ್ಯದರ್ಶಿಯನ್ನು ನೀಡಿ ಎಂದು ಆಗ್ರಹಿಸಿದರು.
ಚಂದ್ರಾವತಿಯವರು ಇಲ್ಲಿನ ಕಾರ್ಯದರ್ಶಿಯಾಗಿದ್ದ ಸಂದರ್ಭ ಗ್ರಾಮ ಸಭೆ, ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಕಡತಕ್ಕಷ್ಟೇ ಸೀಮಿತವಾಗುತ್ತಿತ್ತು. ಇದಕ್ಕೆ ಉದಾಹರಣೆಯಾಗಿ ಗ್ರಾ.ಪಂ. ವ್ಯಾಪ್ತಿಯ ತಾಳೆಹಿತ್ಲುವಿನಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಸುಮಾರು ಎರಡು ವರ್ಷದಿಂದ ಗ್ರಾಮ ಸಭೆ, ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಗಾಗಿ ಇಲ್ಲಿ ಎಲ್ಲಾ ಕುಡಿಯುವ ನೀರು ಬಳಕೆದಾರರಿಗೂ ಸಮಾನ ನ್ಯಾಯ ಅನುಸರಿಸುವ ಬಗ್ಗೆ ನಿರ್ಣಯಗಳಾಗಿತ್ತು. ಆದರೆ ಅದಿನ್ನೂ ಅನುಷ್ಠಾನಗೊಂಡಿಲ್ಲ. ಆದ್ದರಿಂದ ಇಲ್ಲಿ ಈಗಲೂ ಅಮೂಲ್ಯ ಜೀವಜಲ ದುರುಪಯೋಗವಾಗುತ್ತಿದೆ. ಹೀಗೆ ಹಲವು ನಿರ್ಣಯಗಳು ಕಡತಗಷ್ಟೇ ಸೀಮಿತವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಖಲಂದರ್ ಶಾಫಿ, ಮುಖಂಡರಾದ ಸೈಯ್ಯದ್ ಇಸ್ಮಾಯಿಲ್ ತಂಙಳ್, ಅಶ್ರಫ್ ಬಿ.ಟಿ. ನೆಕ್ಕಿಲಾಡಿ, ಇಸ್ಮಾಯಿಲ್ ನೆಕ್ಕಿಲಾಡಿ ಉಪಸ್ಥಿತರಿದ್ದರು.







